ನಮ್ಮ ಸಿಂಧನೂರು, ಮೇ 31
ಕಳೆದ ಹಲವು ದಿನಗಳಿಂದ ಆಗಾಗ ಸುರಿದ ಮಳೆಗೆ ನೆಲ ಒಂದಿಷ್ಟು ತಂಪಾಗಿತ್ತು. ಮೇ 30ರಿಂದ ಪುನಃ ಉರಿಬಿಸಿಲು ಮರುಕಳಿಸಿದ್ದು, ಸಿಂಧನೂರಿನಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರು 38 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಯಿತು. ಕೆಲಸ ಕಾರ್ಯಗಳ ನಿಮಿತ್ತ ನಗರಕ್ಕೆ ಆಗಮಿಸಿದ ಜನರು ನೆರಳಿನ ಕಡೆಗೆ ಧಾವಿಸುತ್ತಿದ್ದುದು ಕಂಡುಬಂತು. ಸಂಜೆಯೊಳಗೆ 40 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇನ್ನೇನು ಮಳೆಗಾಲ ಶುರುವಾಯಿತು ಎನ್ನುವಷ್ಟರಲ್ಲಿ ಪುನಃ ಬಿಸಿಲಿನ ತಾಪ ಮುನ್ನೆಲೆಗೆ ಬಂದಿರುವುದು ಜನಸಾಮಾನ್ಯರ ಮೇಲೆ ಮತ್ತಷ್ಟು ಒತ್ತಡ ಉಂಟಾಗಿದೆ. ಬಿಸಿಲಿನ ಬೇಗೆಯ ನಡುವೆ ಬಿಸಿಗಾಳಿಯೂ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.