ಬಡ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಸಿಂಧನೂರು ಸರ್ಕಾರಿ ಮಹಾವಿದ್ಯಾಲಯ

Spread the love

ಭತ್ತದ ಕಣಜ, ರಾಯಚೂರು ಜಿಲ್ಲೆಯ ವಾಣಿಜ್ಯ ಕೇಂದ್ರ ಹಾಗೂ ವಿವಿಧ ಜಿಲ್ಲಾ ಕೇಂದ್ರಗಳಿಗೆ ಸಾರಿಗೆ-ಸಂಪರ್ಕ ದೃಷ್ಟಿಯಿಂದ ಜಂಕ್ಷನ್ ಆಗಿರುವ ಸಿಂಧನೂರು ಶೈಕ್ಷಣಿಕ ರಂಗದಲ್ಲೂ ಇಂದು ಗಮನಾರ್ಹ ಸಾಧನೆ ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆ ಬೆಳೆದಂತೆಲ್ಲಾ ಹೊಸ ಹೊಸ ಪ್ರಯೋಗಗಳು ಇಲ್ಲಿ ನಡೆಯುತ್ತಿದ್ದು, ಸಿಂಧನೂರಿನ ವಿದ್ಯಾರ್ಥಿ, ಯುವಜನರು ತಮ್ಮ ಬೌದ್ಧಿಕ ಪ್ರತಿಭೆಯಿಂದ ಸರ್ಕಾರಿ ನೌಕರಿ ಸೇರಿದಂತೆ ಖಾಸಗಿ ರಂಗದಲ್ಲೂ ತಮ್ಮ ನೈಪುಣ್ಯತೆ ಮೆರೆಯುತ್ತಿದ್ದಾರೆ. ವಿದ್ಯಾರ್ಥಿಗಳ ಇಂತಹ ಸಾಧನೆಯ ಹಿಂದೆ ನಗರ ಸೇರಿದಂತೆ ತಾಲೂಕಿನ ಶಿಕ್ಷಣ ಸಂಸ್ಥೆಗಳ ಪಾತ್ರ ಮರೆಯುವಂತಿಲ್ಲ; ಅದರಲ್ಲೂ ಸಿಂಧನೂರಿನ ಸರ್ಕಾರಿ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆಯಂತೂ ಇತರೆ ಜಿಲ್ಲೆಯವರನ್ನೂ ಹುಬ್ಬೇರಿಸುವಂತೆ ಮಾಡಿರುವುದಂತೂ ಸುಳ್ಳಲ್ಲ. ಕಳೆದ ಐದು ದಶಕಗಳ ಹಿಂದೆ ಸಿಂಧನೂರು ತಾಲೂಕು ಶೈಕ್ಷಣಿಕ ರಂಗದಲ್ಲಿ ಅತ್ಯಂತ ಹಿಂದುಳಿದಿತ್ತು ಅಲ್ಲದೇ ಉನ್ನತ ಶಿಕ್ಷಣ ಪಡೆಯಬೇಕೆನ್ನುವವರು ದೂರದ ಜಿಲ್ಲೆಗಳಿಗೆ ಹೋಗಿ ಕಲಿಯುವುದು ಅನಿವಾರ್ಯವಾಗಿತ್ತು. ಇನ್ನು ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣ ಎನ್ನುವುದು ನಿಲುಕದ ನಕ್ಷತ್ರವಾಗಿ ಪರಿಣಮಿಸಿತ್ತು. ಕೆಲವರು ಅನ್ಯ ಜಿಲ್ಲೆಗಳಿಗೆ ಹೋಗಲು ಆಗದೇ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ ಸಾಕಷ್ಟು ಉದಾಹರಣೆಗಳಿವೆ. ಇನ್ನು ವಿದ್ಯಾರ್ಥಿನಿಯರಿಗಂತೂ ಉನ್ನತ ಶಿಕ್ಷಣ ಗಗನ ಕುಸುಮವೇ ಆಗಿತ್ತು. ಇಂತಹ ಸಂದರ್ಭದಲ್ಲಿ ಸಿಂಧನೂರಿಗೆ ಒಂದು ಉನ್ನತ ಸರ್ಕಾರಿ ಶಿಕ್ಷಣ ಕೇಂದ್ರ ಅವಶ್ಯವಾಗಿ ಬೇಕು, ಅದನ್ನು ಎಷ್ಟೇ ಕಷ್ಟಸಾಧ್ಯವಾದರೂ ಸರ್ಕಾರದಿಂದ ಮಂಜೂರಿ ಮಾಡಿಸಿಕೊಂಡು ಬರಲೇಬೇಕೆಂದು ಪಣ ತೊಟ್ಟವರಲ್ಲಿ ಮೊದಲಿಗರು ಎಂದರೆ ಅಂದಿನ ಶಾಸಕರಾಗಿದ್ದ ಅಮರೇಗೌಡ ಗದ್ರಟಗಿ ಅವರು ಎಂದರೆ ಅತಿಶಯೋಕ್ತಿಯೇನಲ್ಲ. ಕಮ್ಯುನಿಸ್ಟ್ ಚಳವಳಿಯ ಹಿನ್ನೆಲೆಯಲ್ಲಿ ರಾಜಕೀಯವಾಗಿ ಬೆಳೆದು ಬಂದಿದ್ದ, ಅಮರೇಗೌಡ ಗದ್ರಟಗಿಯವರು ದುಡಿಯುವ ವರ್ಗದ ಜನರ ಮಕ್ಕಳ ಭವಿಷ್ಯತ್ತಿನ ಬಗ್ಗೆ ವಿಶೇಷ ಕಳಕಳಿಯುಳ್ಳವರಾಗಿದ್ದರು. ಬಡವರು, ತುಳಿತಕ್ಕೊಳಗಾದವರು, ಎಲ್ಲ ಸಮುದಾಯಗಳ ದುಡಿಯುವ ವರ್ಗದ ಜನರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ನೆಲೆ ಕಂಡುಕೊಳ್ಳಲು ಶಿಕ್ಷಣವೇ ಹೆದ್ದಾರಿ, ಸಮಾಜದಲ್ಲಿ ಅತ್ಯಂತ ಕೆಳ ಸ್ತರದಲ್ಲಿರುವವರ ಮಕ್ಕಳಿಗೆ ಹೇಗಾದರೂ ಮಾಡಿ ಉನ್ನತ ಶಿಕ್ಷಣವನ್ನು ತಲುಪಿಸಬೇಕೆನ್ನುವ ಹಠದೊಂದಿಗೆ ಏನೆಲ್ಲಾ ಸವಾಲುಗಳು ಎದುರಾದರೂ ತಮ್ಮ ಜೊತೆಗಾರರು ಹಾಗೂ ಟೀಂ ವರ್ಕನೊಂದಿಗೆ ಸಿಂಧನೂರಿಗೆ ಪದವಿ ಮಹಾವಿದ್ಯಾಲಯ ತರುವಲ್ಲಿ ಯಶಸ್ವಿಯಾಗಿದ್ದನ್ನೂ ಇಂದಿಗೂ ಹಲವರು ಮನದುಂಬಿ ಸ್ಮರಿಸುತ್ತಾರೆ.

Namma Sindhanuru Click For Breaking & Local News

ಕಾಲೇಜು ಸ್ಥಾಪನೆಯಲ್ಲಿ ಮಾಜಿ ಶಾಸಕರಾದ ಅಮರೇಗೌಡ ಗದ್ರಟಗಿ ಅವರೊಂದಿಗೆ ಬಸವಂತರಾಯ್ ಪಾಟೀಲ್, ಎಂ.ಮಲ್ಲಪ್ಪ, ಮಾಜಿ ಸಂಸದರಾದ ಕೆ.ವಿರೂಪಾಕ್ಷಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಸನಗೌಡ ಬಾದರ್ಲಿ, ದೊಡ್ಡನಗೌಡ ಕನ್ನಾರಿ, ಪಿಎಲ್‌ಡಿಬಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಗುಂಜಳ್ಳಿ ಶಂಕರಗೌಡ್ರು ಅವರ ಶ್ರಮವೂ ಅವಿಸ್ಮರಣೀಯವಾಗಿದೆ. ಕಾಲೇಜು ತರಗತಿಗಳನ್ನು ಆರಂಭದಲ್ಲಿ ಸಂದರ್ಭದಲ್ಲಿ ಇಂದಿನ ಪಿಎಲ್‌ಡಿಬಿ ಬ್ಯಾಂಕ್‌ನ ಕೊಠಡಿಗಳಲ್ಲಿ ಆರಂಭಿಸಲಾಗಿತ್ತು. ವಿದ್ಯಾರ್ಥಿಗಳ ಸಂಖ್ಯೆ ಮೊದ ಮೊದಲು ಕಡಿಮೆ ಇತ್ತು. ತದನಂತರ ಕಾಲೇಜು ಆರಂಭದ ಬಗ್ಗೆ ಹಳ್ಳಿ ಹಳ್ಳಿಗಳಲ್ಲಿ ವಿಷಯ ವ್ಯಾಪಿಸಿದ್ದರಿಂದ ಬರು ಬರುತ್ತಾ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸಂಖ್ಯೆ ಜಾಸ್ತಿಯಾಯಿತು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಗುಣಮಟ್ಟದ ಶಿಕ್ಷಣ ನೀಡಲು ಬರುವ ದಿನಗಳಲ್ಲಿ ಶಾಶ್ವತ ಕಟ್ಟಡಕ್ಕಾಗಿ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಜಾಗೆಯನ್ನು ಗುರುತಿಸಿ ಕಾಲೇಜಿಗೆ ಸ್ಥಳ ನಿಗದಿಗೊಳಿಸಿ ಶಾಶ್ವತ ಕಟ್ಟಡ ನಿರ್ಮಿಸಲಾಯಿತು. ತದನಂತರದ ದಿನಗಳಲ್ಲಿ ಕಾಲೇಜು ಓತಪ್ರೋತವಾಗಿ ಬೆಳೆವಣಿಗೆ ಕಂಡಿತು. ಇಲ್ಲಿ ಕಲಿತ ವಿದ್ಯಾರ್ಥಿಗಳು ತಮ್ಮ ಪ್ರಾವೀಣ್ಯತೆಯಿಂದ ಸಮಾಜದ ವಿವಿಧ ರಂಗಗಳಲ್ಲಿ ಹೆಸರು ಮಾಡುವ ಮೂಲಕ ಕಾಲೇಜಿಗೆ ಮತ್ತು ಉಪನ್ಯಾಸಕ ವೃಂದಕ್ಕೆ ಒಳ್ಳೆಯ ಕೀರ್ತಿ ತಂದಿದ್ದಾರೆ. ಕಾಲೇಜಿನ ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರದಿಂದ ಹೆಚ್ಚುವರಿ ಕೋರ್ಸ್ ಮಂಜೂರು ಮಾಡಿಸಿಕೊಂಡು ಬರುವುದೂ ಸೇರಿದಂತೆ ಅನುದಾನ ತರುವಲ್ಲಿ ಹಾಲಿ ಶಾಸಕರಾದ ಹಂಪನಗೌಡ ಬಾದರ್ಲಿಯವರು ಹೆಚ್ಚಿನ ಕಾಳಜಿ ವಹಿಸಿರುವುದು ಸ್ತುತ್ಯಾರ್ಹವಾಗಿದೆ. ಯಾವುದೇ ಪ್ರದೇಶದ ಅತ್ಯುನ್ನತ ಜ್ಞಾನ ಶಾಖೆಯೆಂದರೆ ಅಲ್ಲಿನ ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು. ಕಾಲೇಜುಗಳಲ್ಲಿ ಅತ್ಯುನ್ನತ ಭೋಧನೆ, ಕಲಿಕೆ, ಸಂಶೋಧನಾ ಚಟುವಟಿಕೆಗಳು ಯಾವುದೇ ಪ್ರದೇಶದ ಭವಿಷ್ಯವನ್ನು ಉಜ್ವಲಗೊಳಿಸಬಲ್ಲವು ಎಂಬುದು ಈಗಾಗಲೇ ಸಾಬೀತಾಗಿದೆ. ಆ ನಿಟ್ಟಿನಲ್ಲಿ ಸಿಂಧನೂರಿನ ಪದವಿ ಮಹಾವಿದ್ಯಾಲಯ ದಾಪುಗಾಲು ಇಟ್ಟಿರುವುದು, ಇಲ್ಲಿ ಅಂದಾಜು ೩೫ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿತು ಬದುಕು ರೂಪಿಸಿಕೊಂಡಿರುವುದಲ್ಲದೇ ಇತರರಿಗೆ ಪ್ರೇರಕ ಶಕ್ತಿಯಾಗಿರುವುದು ಸಣ್ಣ ಮಾತೇನಲ್ಲ. ಶಿಕ್ಷಣ ಎನ್ನುವುದು ಉಳ್ಳವರ ಸ್ವತ್ತಾಗಬಾರದು, ಸಮಾಜವನ್ನು ಕಟ್ಟುವ ಅದರ ಭಾರವನ್ನು ಹೊತ್ತಿರುವ ತಳ ಸಮುದಾಯಗಳು ಹಾಗೂ ಬೆವರು ಬಸಿದು ದುಡಿಯುವ ವರ್ಗದವರ ಮಕ್ಕಳಿಗೂ ದೊರೆಯಬೇಕು ಎನ್ನುವ ಮಹಾದಾಸೆ ಮತ್ತು ಮಹಾತ್ವಾಕಾಂಕ್ಷೆ ಹೊಂದಿದ್ದ ಅಮರೇಗೌಡ ಗದ್ರಟಗಿಯವರ ಇಚ್ಛಾಶಕ್ತಿಯ ಫಲವಾಗಿ ಅಂದು ಪದವಿ ಮಹಾವಿದ್ಯಾಲಯ ಸಿಂಧನೂರಿನಲ್ಲಿ ಸ್ಥಾಪನೆಗೊಂಡು ಇಂದು ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಅತ್ಯಂತ ಸಂತಸದಾಯಕ ಕ್ಷಣವಾಗಿದೆ. ಹಾಲಿ ಶಾಸಕರಾದ ಹಂಪನಗೌಡ ಬಾದರ್ಲಿಯವರ ಅಭಿಲಾಸೆಯಂತೆ, ಕಾಲೇಜಿನ ಸುವರ್ಣ ಮಹೋತ್ಸವಕ್ಕೆ ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಸಚಿವ ಮಹನೀಯರು ಆಗಮಿಸುತ್ತಿರುವುದು ಸ್ಮರಣಾರ್ಹವಾಗಿದೆ. ಸಿಂಧನೂರು ಪದವಿ ಮಹಾವಿದ್ಯಾಲಯದಲ್ಲಿ ಇನ್ನಷ್ಟು ಹೊಸ ಹೊಸ ಕೋರ್ಸ್ಗಳು ಆರಂಭವಾಗಿ ಹೆಚ್ಚೆಚ್ಚು ವಿದ್ಯಾರ್ಥಿಗಳು ಕಲಿತು ಭವಿಷ್ಯ ರೂಪಿಸಿಕೊಳ್ಳಲಿ ಎಂದು ಈ ಮೂಲಕ ಶುಭಾರೈಸುತ್ತೇನೆ. ಅಲ್ಲದೇ ಈ ಕಾಲೇಜಿನ ಏಳಿಗೆಗೆ ದುಡಿದ ಇಲ್ಲಿವರೆಗಿನ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗಳು, ಆಡಳಿತ ಮಂಡಳಿಯವರು ಹಾಗೂ ಪ್ರತ್ಯಕ್ಷ, ಪರೋಕ್ಷವಾಗಿ ಶ್ರಮಿಸಿದ ಸರ್ವರಿಗೂ ವಿಶೇಷ ಧನ್ಯವಾದಗಳು..

  • ವೆಂಕನಗೌಡ ಗದ್ರಟಗಿ, ಕಾರ್ಮಿಕ ಮುಖಂಡರು, ಸಿಂಧನೂರು
    ಮೊ: ೯೭೩೯೭೧೦೯೭೩

Spread the love

Leave a Reply

Your email address will not be published. Required fields are marked *