ನಮ್ಮ ಸಿಂಧನೂರು. ಮೇ 28
ನಗರದಲ್ಲಿ ಕುಡಿವ ನೀರಿನ ಅಭಾವ ತಲೆದೋರಿದ ಹಿನ್ನೆಲೆಯಲ್ಲಿ ನಗರಸಭೆ ದಿನಾಂಕ: 28-05-2024ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. “ಸಿಂಧನೂರು ನಗರಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಲು ಹಾಗೂ ನೀರು ಸಂರಕ್ಷಣೆಯ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು ಕುಡಿಯುವ ನೀರನ್ನು ಮಿತವಾಗಿ ಬಳಸತಕ್ಕದ್ದು ಹಾಗೂ ನಗರದಲ್ಲಿ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡಗಳಿಗೆ ನೀರನ್ನು ಯಾವುದೇ ಕಾರಣಕ್ಕೂ ಕಟ್ಟಡ ನಿರ್ಮಾಣ ಕೆಲಸಗಳಿಗೆ ಉಪಯೋಗಿಸುವಂತಿಲ್ಲ. ಒಂದು ವೇಳೆ ಅಂತಹ ಪ್ರಕರಣಗಳು ಕಂಡುಬಂದಲ್ಲಿ ಕಟ್ಟಡ ಮಾಲೀಕರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ಹಾಗೂ ಸಾರ್ವಜನಿಕರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ನಗರಸಭೆಯಿಂದ ಸರಬರಾಜು ಮಾಡುವ ನೀರನ್ನು ಸೋಸಿ, ಕಾಯಿಸಿ, ಆರಿಸಿ ಕುಡಿಯಲು ಕೋರಲಾಗಿದೆ” ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ನಗರಾಭಿವೃದ್ಧಿ ಹೋರಾಟ ಸಮಿತಿ ನಿಯೋಗ ಭೇಟಿ
ನಗರದಲ್ಲಿ ಕುಡಿವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ತಾರರಕ್ಕೇರಿದ ಹಿನ್ನೆಲೆಯಲ್ಲಿ, ನಗರಾಭಿವೃದ್ಧಿ ಹೋರಾಟ ಸಮಿತಿಯಿಂದ ಸೋಮವಾರ ನಿಯೋಗ ಭೇಟಿಯಾಗಿ, ವಿವಿಧ ವಾರ್ಡ್ ಗಳಲ್ಲಿ ನೀರಿನ ಅಭಾವದಿಂದ ಜನರು ಅನುಭವಿಸುತ್ತಿರುವ ಸಮಸ್ಯೆ ಹಾಗೂ ತುರ್ವಿಹಾಳ ಕೆರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಡುಬಂದ ಹಲವು ವಿಷಯಗಳನ್ನು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಅವರ ಗಮನ ಸೆಳೆಯಲಾಗಿತ್ತು. ಅಲ್ಲದೇ ಕುಡಿವ ನೀರಿನ ಅಭಾವ ಪರಿಹರಿಸುವ ಹಿನ್ನೆಲೆಯಲ್ಲಿ ಮತ್ತು ಜೂನ್, ಜುಲೈನಲ್ಲಿ ಸಮಸ್ಯೆ ವಿಪರೀತಕ್ಕೆ ಹೋಗದಂತೆ ತಡೆಯಲು, ಬಡ, ಕೂಲಿಕಾರರು, ಮಧ್ಯಮ ವರ್ಗದವರು ಹೆಚ್ಚಾಗಿ ವಾಸಿಸುವ ಕಾಲೋನಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಸೇರಿದಂತೆ ಅಗತ್ಯವಿರುವ ಕಡೆ ಈ ಕೂಡಲೇ ಸಿಸ್ಟನ್ ಅಳವಡಿಸುವುದು ಸೇರಿದಂತೆ ವಿವೇಚನೆ ಬಳಸಿ ಹಲವು ಕ್ರಮಗಳನ್ನು ವಿಳಂಬ ಮಾಡದೇ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತರು ದಿನಾಂಕ: 28-08-2024ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿ, ಹೊಸದಾಗಿ ಕಟ್ಟಡ ನಿರ್ಮಾಣದ ಕೆಲಸಗಳಿಗೆ ಕುಡಿವ ನೀರು ಬಳಸದಂತೆ ನೋಟಿಸು ಹೊರಡಿಸಿದ್ದಾರೆ.