(ವಿಶೇಷ : ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮೇ 27
ನಗರದಲ್ಲಿ ಕುಡಿವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ನಗರಸಭೆ ಮೇ ೧೬ರಂದು ಹೊರಡಿಸಿದ ಪ್ರಕಟಣೆಯಂತೆ ಕೆಲವೊಂದು ವಾರ್ಡ್ಗಳಲ್ಲಿ 11 ದಿನಗಳು ಕಳೆದರೂ ನೀರು ಪೂರೈಕೆಯಾಗಿಲ್ಲ. ನೀರು ಸಂಗ್ರಹಿಸಿಟ್ಟುಕೊಳ್ಳಲು ಆಗದ ಬಡ, ಕೂಲಿಕಾರ ಕುಟುಂಬಗಳು ದೈನೇಸಿ ಸ್ಥಿತಿ ಅನುಭವಿಸುತ್ತಿದ್ದು, ಕೂಡಲೇ ನಗರಸಭೆ ಎಚ್ಚೆತ್ತುಕೊಂಡು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳದೇ ಹೋದರೆ ಜನರು ಬೀದಿಗಿಳಿದು ಹೋರಾಟಕ್ಕೆ ಮುಂದಾಗುವುದರಲ್ಲಿ ಅನುಮಾನವಿಲ್ಲ ಎಂದು ನಗರಾಭಿವೃದ್ಧಿ ಹೋರಾಟ ಸಮಿತಿಯ ನಿಯೋಗ ನಗರಸಭೆ ಆಡಳಿತ ಮಂಡಳಿಗೆ ಎಚ್ಚರಿಸಿದೆ. ಸೋಮವಾರ ನಿಯೋಗದೊಂದಿಗೆ ತೆರಳಿದ ನಗರಾಭಿವೃದ್ಧಿ ಹೋರಾಟ ಸಮಿತಿ, ಪೌರಾಯುಕ್ತ ಮಂಜುನಾಥ ಗುಂಡೂರು ಅವರೊಂದಿಗೆ, ನಗರದ ಹಲವು ವಾರ್ಡ್ಗಳಲ್ಲಿ ನೀರಿನ ಅಭಾವ ಉಂಟಾಗಿ ಜನರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಮನವರಿಕೆ ಮಾಡಿತು.
ಮೇನಲ್ಲೇ ಸಮಸ್ಯೆ ಎದುರಾದರೆ ಜೂನ್‌ನಲ್ಲಿ ನಿಭಾಯಿಸುವುದು ಹೇಗೆ ?
“ಬಡಿಬೇಸ್, ಖದರಿಯಾ ಕಾಲೋನಿ, ಗಂಗಾನಗರಕ್ಕೆ ಕಳೆದ 11 ದಿನಗಳಿಂದ ನೀರು ಪೂರೈಕೆಯಾಗಿಲ್ಲ. ಇಲ್ಲಿನ ನಿವಾಸಿಗಳು ಬಳಕೆ ಮತ್ತು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಅಲ್ಲದೇ ಮಾರ್ಚ್ನಲ್ಲಿ ತುರ್ವಿಹಾಳ ಕೆರೆ ಸೇರಿ ೩ ಕೆರೆಯನ್ನು ಭರ್ತಿ ಮಾಡುವ ಕಾರ್ಯ ಸಂಪೂರ್ಣ ಆಗಿಲ್ಲವೆಂದು ಅಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಮಗೆ ತಿಳಿದುಬಂದಿದೆ. ಜೂನ್, ಜುಲೈ ತಿಂಗಳಿಗೆ ಆಗುವಷ್ಟು ನೀರು ಕೆರೆಯಿಂದ ಲಭ್ಯವಾಗುತ್ತದೆಯೆಂದು ನಗರಸಭೆಯಿಂದಲೇ ಹೇಳಲಾಗಿತ್ತು. ಆದರೆ ಮೇನಲ್ಲೇ ನೀರಿನ ಸಂಕಷ್ಟ ಎದುರಾಗಿದೆ. ಹೀಗಾದರೆ ಪರಿಸ್ಥಿತಿ ನಿರ್ವಹಣೆಗೆ ಹೇಗೆ” ಎಂದು ಸಮಿತಿಯ ಡಿ.ಎಚ್.ಕಂಬಳಿ ಅವರು ಪೌರಾಯುಕ್ತರ ಗಮನ ಸೆಳೆದರು.
ಕೂಲಿಕಾರರು, ಬಡವರು ೧೦ ದಿನಗಳವರೆಗೆ ನೀರು ಸಂಗ್ರಹಿಸಿಟ್ಟುಕೊಳ್ಳಲು ಹೇಗೆ ಸಾಧ್ಯ ?
ಚಂದ್ರಶೇಖರ ಗೊರಬಾಳ, “ಕೆರೆಗಳ ಸಾಮರ್ಥ್ಯಕ್ಕೆ ತಕ್ಕಂತೆ ಈ ಬಾರಿ ನೀರು ತುಂಬಿಸಿಲ್ಲ. ೪ ದಿನ, ೮ದಿನ ಈಗ ೧೦ ದಿನಕ್ಕೆ ನೀರು ಪೂರೈಕೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ನಗರಸಭೆ ಪ್ರಕಟಣೆ ನೀಡಿದಂತೆ 11 ದಿನಗಳಾದರೂ ಕೆಲವು ಕಡೆ ನೀರು ಬಂದಿಲ್ಲ. ಹೀಗಾದರೆ ಅತ್ಯಂತ ಜನಸಂದಣಿಯ ಬಡ, ಮಧ್ಯಮ ವರ್ಗಗಳಿರುವ ಖದರಿಯಾ ಕಾಲೋನಿ, ಎ.ಕೆ.ಗೋಪಾಲನಗರ, ಇಂದಿರಾನಗರ, ಸೇರಿದಂತೆ ಇನ್ನಿತರೆ ಕಾಲೋನಿಗಳ ನಿವಾಸಿಗಳ ಪರಿಸ್ಥಿತಿಗೆ ಹೇಗೆ. ನಗರದ ಹಲವು ವಾರ್ಡ್ಗಳಲ್ಲಿ ಕೂಲಿಕಾರರು, ಬಡವರು, ಸ್ಲಂ ನಿವಾಸಿಗಳು ಇದ್ದು, ಅವರು 10 ದಿನಗಳವರೆಗೆ ನೀರು ಸಂಗ್ರಹಿಸಿಟ್ಟುಕೊಳ್ಳಲು ಅವರ ಬಳಿ ಸಂಪು, ಅಗತ್ಯ ಸಂಪನ್ಮೂಲಗಳು ಇಲ್ಲ. ಹೀಗಾಗಿ ಮರ‍್ನಾಲ್ಕು ದಿನಗಳಲ್ಲಿ ನೀರು ಖಾಲಿಯಾಗಿ, ಬಳಕೆ ನೀರಿಗೂ ಅಲೆದಾಡುವಂತಾಗಿದೆ. ಹಾಗಾಗಿ ನಗರಸಭೆ ಈ ಪರಿಸ್ಥಿತಿಯನ್ನು ಅರಿತುಕೊಂಡು ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಬೇಕು’’ ಎಂದು ಪೌರಾಯುಕ್ತರನ್ನು ಆಗ್ರಹಿಸಿದರು.
ಬಾರ್, ರೆಸ್ಟೋರೆಂಟ್‌ಗಳ ಅಕ್ರಮ ನಳಗಳ ಬಗ್ಗೆ ಕ್ರಮ ಏಕಿಲ್ಲ ?
“ನಗರದಲ್ಲಿ ಕುಡಿವ ನೀರಿನ ಸಂಕಷ್ಟ ಎದುರಾಗಿದ್ದರೂ ಇದುವರೆಗೂ ನಗರಸಭೆ ಸದಸ್ಯರು ಈ ಬಗ್ಗೆ ಚಕಾರ ಎತ್ತಿಲ್ಲ. ಇನ್ನು ಎಂಜಿನಿಯರ್‌ಗಳು ಯಾವ ವಾರ್ಡ್ನಲ್ಲಿ ಏನು ಸಮಸ್ಯೆ ಇದೆ ಎಂದು ವಾರ್ಡ್ ಸುತ್ತಿ ಗಮನಿಸುವುದಿಲ್ಲ. ಇನ್ನೂ ನಗರಸಭೆಯಿಂದ ಏನೇ ಪ್ರಕಟಣೆ ಹೊರಡಿಸಿದರೂ ಜನಸಾಮಾನ್ಯರ ಮೇಲೆ ಇನ್ನಿಲ್ಲದ ನಿಯಮ ಹೇರಲಾಗುತ್ತದೆ. ಆದರೆ, ಬಾರ್, ರೆಸ್ಟೋರೆಂಟ್‌ನವರು ಅಕ್ರಮವಾಗಿ ಎರಡ್ಮೂರು ನಳಗಳನ್ನು ಹೊಂದಿದ್ದರೂ, ಅವರ ಬಗ್ಗೆ ಯಾರೂ ಮಾತನಾಡುವುದಿಲ್ಲ, ಅಂತಹ ನಳಗಳನ್ನು ಪತ್ತೆಹಚ್ಚಿ ಯಾಕೆ ಕ್ರಮ ಕೈಗೊಂಡಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಗರಸಭೆಯಿಂದ ವಾಟರ್ ಪ್ಲಾಂಟ್ ನಿರ್ಮಸಿದ್ದು, ಅವು ಸರಿಯಾಗಿ ರನ್ ಆಗ್ತಾಯಿಲ್ಲ, ಆದರೆ ಖಾಸಗಿಯವರ ಪ್ಲಾಂಟ್‌ಗಳು ಫುಲ್ ರಷ್ ಇವೆ. ಇನ್ನು ನೀರಿನ ಇನ್‌ಪೆಕ್ಷನ್‌ನಿಂದ ಮಕ್ಕಳಿಗೆ ಭೇದಿಯ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಮಕ್ಕಳ ಆಸ್ಪತ್ರೆಗಳಲ್ಲಿ ಒಳ ಮತ್ತು ಹೊರರೋಗಿಗಳ ಮಕ್ಕಳ ಸಂಖ್ಯೆ ಹೆಚ್ಚಿದೆ. ಯಾವುದೇ ರೀತಿಯ ಸಮಸ್ಯೆಯಾದರೆ ಹೊಣೆ ಯಾರು ?” ಎಂದು ನಾಗರಾಜ್ ಪೂಜಾರ್ ಆಕ್ರೋಶ ವ್ಯಕ್ತಪಡಿಸಿದರು.
“ಯಾವುದೇ ಕಾರಣಕ್ಕೂ ವಿಳಂಬ ಮಾಡಬೇಡಿ”
“ಕುಡಿವ ನೀರಿನ ವಿಷಯದಲ್ಲಿ ನಗರಸಭೆ ಆಡಳಿತ ಮಂಡಳಿ ಯಾವುದೇ ರೀತಿಯ ವಿಳಂಬ ಧೋರಣೆ ಅನುಸರಿಸದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಬೇಸಿಗೆ ಕಾರಣ ದಿನದಿಂದ ದಿನಕ್ಕೆ ನೀರಿನ ಅಭಾವ ಜಾಸ್ತಿಯಾಗುತ್ತಿದೆ. ದಿನವೂ ಒಂದಿಲ್ಲೊAದು ವಾರ್ಡ್ಗಳಲ್ಲಿ ಜನರು ನೀರಿಗಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ನಿಷ್ಕಾಳಜಿ ವಹಿಸದೇ ಗಂಭೀರವಾಗಿ ಪರಿಗಣಿಸಿ ಕ್ರಮಕ್ಕೆ ಮುಂದಾಗಬೇಕು” ಎಂದು ವೀರಭದ್ರಗೌಡ ಅಮರಾಪುರ ಒತ್ತಾಯಿಸಿದರು.
ನಿಯೋಗದ ಮನವಿಗೆ ಪೌರಾಯುಕ್ತರ ಸ್ಪಂದನೆ
ನಗರಾಭಿವೃದ್ಧಿ ಹೋರಾಟ ಸಮಿತಿಯ ನಿಯೋಗ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಪೌರಾಯುಕ್ತ ಮಂಜುನಾಥ ಗುಂಡೂರು ಅವರು, ನಗರದಲ್ಲಿ ಕುಡಿವ ನೀರಿನ ಸಮಸ್ಯೆ ಉಂಟಾಗಿರುವುದು ಗಮನಕ್ಕೆ ಇದೆ. ಈ ನಿಟ್ಟಿನಲ್ಲಿ ನಗರಸಭೆಯಿಂದ ಕ್ರಮಕ್ಕೆ ಮುಂದಾಗಿದೆ. ಈ ಕುರಿತು ಶಾಸಕರ ಗಮವನ್ನೂ ಸೆಳೆಯಲಾಗಿದೆ. ಸದ್ಯ ನಗರಸಭೆ ವ್ಯಾಪ್ತಿಯಲ್ಲಿರುವ 3 ಕೆರೆಗಳಿಂದ ಇನ್ನೂ 15 ದಿನಗಳವರೆಗೆ ಕುಡಿವ ನೀರು ಪೂರೈಕೆ ಮಾಡಬಹುದಾಗಿದ್ದು, ತದನಂತರ ದಿನಗಳಲ್ಲಿ ಪೂರೈಕೆಗಾಗಿ 2 ಖಾಸಗಿ ಕೆರೆಗಳನ್ನು ಬಳಸಿಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ. ಈ ಎರಡು ಕೆರೆಗಳಿಂದ 30 ದಿನಗಳವರೆಗೆ ಅಂದರೆ ಒಟ್ಟು 45 ದಿನಗಳವರೆಗೆ ನೀರು ಪೂರೈಕೆಗೆ ಪ್ಲಾನ್ ರೂಪಿಸಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ನಗರದಲ್ಲಿ 219 ಬೋರ್‌ವೆಲ್‌ಗಳಿದ್ದು, ಏನೆಲ್ಲವೆಂದರೂ ಪ್ರತಿ ವಾರ್ಡ್ಗೆ ೨ರಿಂದ ೩ ಬೋರ್‌ವೆಲ್‌ಗಳಿವೆ. ಒಳಬಳ್ಳಾರಿ ಮಾರ್ಗದಲ್ಲಿ ಅಂದಾಜು 19 ಬೋರ್‌ವೆಲ್‌ಗಳನ್ನು ಗುರುತಿಸಲಾಗಿದ್ದು, ಅದರಲ್ಲಿ 9 ಬೋರ್‌ವೆಲ್‌ಗಳು ಎರಡೂವರೆ ಇಂಚು ನೀರಿನ ಸಾಮರ್ಥ್ಯವನ್ನು ಹೊಂದಿವೆ. ಈ ಬೋರ್‌ವೆಲ್‌ಗಳಿಂದ ನೀರು ಪೂರೈಕೆಗೆ ಯೋಜನೆ ರೂಪಿಸಲಾಗುವುದು. ಈ ಕುರಿತು ನಗರದ ಆಯಾ ವಾರ್ಡ್ ಕೌನ್ಸಲರ್‌ಗಳ ಜೊತೆಗೆ ಚರ್ಚಿಸಲಾಗುವುದು. ಅತ್ಯಗತ್ಯವಾಗಿ ಅವಶ್ಯವಾಗಿರುವ ವಾರ್ಡ್ಗಳಲ್ಲಿ ಸಿಂಟೆಕ್ಸ್ ಅಳವಡಿಸಿ ನೀರಿನ ವ್ಯವಸ್ಥೆ ಕಲ್ಪಿಸಲು ಮುಂದಾಗಲಾಗುವುದು ಎಂದು ತಿಳಿಸಿದರು.
‘ಕೆರೆ ಹೂಳೆತ್ತಲು 1 ಕೋಟಿ ರೂ ಮಂಜೂರು, ಟೆಂಡರ್ ಹಂತದಲ್ಲಿದೆ’
ತುರ್ವಿಹಾಳ ಕೆರೆ ಹೂಳಿನಿಂದ ಆವೃತ್ತವಾಗಿದ್ದು, 1 ಕೋಟಿ ರೂಪಾಯಿ ವೆಚ್ಚದಲ್ಲಿ ಟೆಂಡರ್ ಹೂಳು ತೆಗೆಸಲು ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗಿದೆ. ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ 50 ಲಕ್ಷ ಹಾಗೂ 15 ಹಣಕಾಸು ಯೋಜನೆಯಿಂದ 50 ಲಕ್ಷ ರೂ. ಮಂಜೂರಾಗಿದ್ದು, ಸದ್ಯದಲ್ಲಿ ಟೆಂಡರ್ ಕರೆಯಲಾಗುವುದು ಎಂದು ಹೇಳಿದರು.
40 ಕೋಟಿ ವೆಚ್ಚದಲ್ಲಿ, ತುರ್ವಿಹಾಳನಲ್ಲಿ 100 ಎಕರೆ ಕೆರೆ ವಿಸ್ತರಣೆ
ನಗರದ ಜನಸಂಖ್ಯೆಗೆ ಅನುಗುಣವಾಗಿ ಕುಡಿವ ನೀರೊದಗಿಸುವ ಹಿನ್ನೆಲೆಯಲ್ಲಿ ತುರ್ವಿಹಾಳ ಬಳಿ ಇರುವ ಕೆರೆ ಇನ್ನೂ 100 ಎಕರೆ ವಿಸ್ತರಿಸಲು ಒಟ್ಟು 40 ಕೋಟಿ ರೂಪಾಯಿ ವೆಚ್ಚದ ಯೋಜನೆಯಿದ್ದು, ಈಗಾಗಲೇ ಸರ್ಕಾರದಿಂದ 20 ಕೋಟಿ ರೂಪಾಯಿ ಮಂಜೂರಾಗಿದೆ. ಡಿಪಿಆರ್ ತಯಾರಿಸಿ ಸರ್ಕಾರಕ್ಕೆ ಕಳಿಸಬೇಕಿದೆ. ಈ ನಡುವೆ ಪ್ರಸ್ತುತ ನೀರಿನ ಸಮಸ್ಯೆ ಪರಿಹರಿಸಲು ಸರ್ಕಾರದಿಂದ ಗ್ರಾಂಟ್ ಬಿಡುಗಡೆಯಾಗಿದೆ ಎಂದು ವಿವರಿಸಿದರು.
ತುರ್ವಿಹಾಳ ಕೆರೆಗೆ ನಗರಾಭಿವೃದ್ಧಿ ಹೋರಾಟ ಸಮಿತಿ ಭೇಟಿ
ಸಿಂಧನೂರು ನಗರದ ನಿವಾಸಿಗಳಿಗೆ ಕುಡಿವ ನೀರಿನ ಮೂಲವಾಗಿರುವ ತುರ್ವಿಹಾಳ ಕೆರೆಯಲ್ಲಿ ನೀರಿನ ಪ್ರಮಾಣ ಕುಸಿದ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಹೋರಾಟ ಸಮಿತಿ ತಂಡ ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕೆರೆಯಲ್ಲಿ ನೀರಿನ ಪ್ರಮಾಣ ತಳಮಟ್ಟಕ್ಕಿಳಿದಿರುವುದು, ಹೂಳು ತುಂಬಿರುವುದು, ಜಾಲಿ-ಬೇಲಿ ಬೆಳೆದಿರುವುದು, ಅಸ್ವಚ್ಛತೆ, ನಿರ್ವಹಣೆ ಕೊರತೆ ಸೇರಿದಂತೆ ಹಲವು ಅಂಶಗಳು ಕಂಡುಬAದವು. ಡಿ.ಎಚ್.ಕಂಬಳಿ, ವೀರಭದ್ರಗೌಡ ಅಮರಾಪುರ, ಚಂದ್ರಶೇಖರ ಗೊರಬಾಳ, ಎಚ್.ಜಿ.ಹಂಪಣ್ಣ, ಎಸ್.ಎ.ಖಾದರ್‌ಸುಭಾನಿ, ನಾಗರಾಜ್ ಪೂಜಾರ್, ಕರೇಗೌಡ ಪಿ.ಕುರುಕುಂದಿ, ಹುಸೇನ್‌ಸಾಬ್, ಬುದ್ದಪ್ಪ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಕೆರೆ ಪ್ರದೇಶಕ್ಕೆ ಭೇಟಿ ನೀಡಿದರು.
ನಗರಾಭಿವೃದ್ಧಿ ಹೋರಾಟ ಸಮಿತಿಯ ಹಕ್ಕೊತ್ತಾಯಗಳು
1) ವಾರ್ಡ್ಗಳಿಗೆ ದಿನವೂ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು.
2) ಸದ್ಯ ನಿಗದಿಪಡಿಸಿರುವ ವೇಳೆಯಂತೆ ತಪ್ಪದೇ ನೀರು ಪೂರೈಕೆ ಮಾಡಬೇಕು.
3) ಆಯಾ ವಾರ್ಡ್ವಾರು ನೀರು ಪೂರೈಕೆ ಮಾಡುವ ಬಗ್ಗೆ ಟೈಮ್ ಟೇಬಲ್ ಪ್ರಕಟಿಸಬೇಕು.
4) ಅಕ್ರಮ ನಳ ನಿಷ್ಕಿçಯಗೊಳಿಸಬೇಕು, ನೀರು ಪೋಲಾಗದಂತೆ ಕ್ರಮ ಕೈಗೊಳ್ಳಬೇಕು.
5) ನಗರಸಭೆ ವ್ಯಾಪ್ತಿಯಲ್ಲಿರುವ ೨೧೯ ಬೋರ್‌ವೆಲ್‌ಗಳ ಮೂಲಕ ಆಯಾ ವಾರ್ಡ್ಗಳಿಗೆ ಪರ್ಯಾಯವಾಗಿ ನೀರಿನ ವ್ಯವಸ್ಥೆ ಮಾಡಬೇಕು
6) ನೀರು ಸಂಗ್ರಹಿಸಿಕೊಳ್ಳಲು ಸಂಪು ಸೇರಿದಂತೆ ಅಗತ್ಯ ಸಂಪನ್ಮೂಲಗಳನ್ನು ಹೊಂದಿರದ ಬಡ, ಕೂಲಿಕಾರರು, ಮಧ್ಯಮ ವರ್ಗದವರು ಹಾಗೂ ಸ್ಲಂ ವಾಸಿಗಳ ಪ್ರದೇಶ ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ಕಡ್ಡಾಯವಾಗಿ ನೀರು ಪೂರೈಕೆ ಮಾಡಬೇಕು.
7) ಕುಡಿವ ನೀರಿನ ಸಮಸ್ಯೆ ಉಲ್ಬಣಗೊಳ್ಳದಂತೆ ನಗರಸಭೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು.