(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮೇ 15
ಸುಸಜ್ಜಿತ ಕಟ್ಟಡ, ತರಗತಿ ಕೊಠಡಿಗಳು, ವಿಶಾಲ ಕ್ಯಾಂಪಸ್, ಆದರೆ ಈ ಮಹಿಳಾ ಕಾಲೇಜಿಗೆ ಸರಿಯಾದ ದಾರಿಯೇ ಇಲ್ಲ ! ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಾಲೇಜು ಕೊಠಡಿಗಳನ್ನು ನಿರ್ಮಿಸಿದ ಇಲಾಖೆ ರಸ್ತೆ ನಿರ್ಮಿಸದೇ ಕೈ ಎತ್ತಿದೆ !! ನಗರದ ಕುಷ್ಟಗಿ ಮಾರ್ಗದ ರಸ್ತೆಯ ಹೆಲಿಪ್ಯಾಡ್ ಸಮೀಪದ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ ವ್ಯಾಪ್ತಿಗೆ ಒಳಪಡುವ ನಗರದ ಸ್ನಾತಕೋತ್ತರ ಮಹಿಳಾ ಅಧ್ಯಯನ ಕೇಂದ್ರ ಇಂಥದ್ದೊಂದು ಅವ್ಯವಸ್ಥೆಗೆ ನಿದರ್ಶನವಾಗಿದೆ.
ಕಳೆದ ಹಲವು ದಿನಗಳಿಂದ ಇದೇ ಮಾರ್ಗದಲ್ಲಿ ಸಾಗುತ್ತ ದೈನೇಸಿ ಸ್ಥಿತಿ ಅನುಭವಿಸುತ್ತಿರುವ ವಿದ್ಯಾರ್ಥಿನಿಯರು ಹಲವು ಬಾರಿ ತಾಲೂಕು ಆಡಳಿತ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಹೋರಾಟ ಹಾಗೂ ಮನವಿಪತ್ರ ರವಾನಿಸುವ ಮೂಲಕ ಗಮನ ಸೆಳೆದರೂ ಇದುವರೆಗೂ ರಸ್ತೆ ನಿರ್ಮಾಣಕ್ಕೆ ಯಾರೂ ಮುಂದಾಗಿಲ್ಲ. ಬೇಲಿ ಮಧ್ಯದ ದಾರಿಯಲ್ಲಿ ಮನಬಂದಂತೆ ಮರಂ ಹಾಕಿ ಕೈಬಿಡಲಾಗಿದ್ದು, ವಿದ್ಯಾರ್ಥಿನಿಯರು ದಿನವೂ ಆತಂಕ, ಭಯದ ನಡುವೆ ಕಾಲ್ನಡಿಗೆಯಲ್ಲೇ ಸಾಗುತ್ತಾರೆ.
ಜಾಲಿ-ಬೇಲಿ ದಾಟಿ ಕಾಲೇಜು ಹೋಗಬೇಕು
ಬಂಡಿ ದಾರಿಗಿಂತಲೂ ಕಡೆಯಾದ ಜಾಲಿ-ಬೇಲಿ ಬೆಳೆದ, ಅಕ್ಕ-ಪಕ್ಕದಲ್ಲಿ ಕಂದಕಗಳಿರುವ ದಾರಿಯಲ್ಲಿ ದಿನವೂ ನೂರಾರು ವಿದ್ಯಾರ್ಥಿನಿಯರು ಭಯದಲ್ಲೇ ಕಾಲೇಜಿಗೆ ನಡೆದುಕೊಂಡು ಹೋಗುತ್ತಾರೆ. ಇನ್ನೂ ಮಳೆಗಾಲದಲ್ಲಿ ಈ ರಸ್ತೆ ಸಂಪೂರ್ಣ ರಾಡಿಮಯವಾಗುವುದರಿಂದ ಎದ್ದುಬಿದ್ದು ಸಾವರಿಸಿಕೊಂಡು ತರಗತಿಗೆ ಹಾಜರಾಗಬೇಕಾದ ದುಃಸ್ಥಿತಿ ಇದೆ.
ನಿರ್ಜನ ಪ್ರದೇಶದಲ್ಲಿ ಕಾಂಪೌಂಡ್ ಇಲ್ಲದ ಕಾಲೇಜು !
ನಗರದ ಅಕ್ಕಮಹಾದೇವಿ ವಿವಿಯ ಸ್ನಾತಕೋತ್ತರ ಕಾಲೇಜಿನ ಜ್ಞಾನಸಿಂಧು ಆವರಣ ನಿರ್ಜನ ಪ್ರದೇಶದಲ್ಲಿದ್ದು, ಸುತ್ತಮುತ್ತಲೂ ಖಾಸಗಿಯವರ ಜಮೀನುಗಳು, ಮುಳ್ಳುಕಂಟಿಗಳು ಇವೆ. ಈ ಪ್ರದೇಶದಲ್ಲಿ ಹಾವು, ಚೇಳು ಸೇರಿದಂತೆ ಇನ್ನಿತರೆ ವಿಷಜಂತುಗಳು ಆಗಾಗ ಕಂಡುಬರುತ್ತಿದ್ದು, ಕಾಲೇಜು ಆವರಣ ಪ್ರವೇಶಿಸಿದರೆ ಹೇಗೆನ್ನುವ ಆತಂಕ ಇಲ್ಲಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಸದಾ ಕಾಡುತ್ತಿದೆ. ನಿರ್ಜನ ಪ್ರದೇಶದಲ್ಲಿ ಕಾಲೇಜು ಇರುವುದಲ್ಲದೇ ಸುತ್ತಲೂ ಕಾಂಪೌಂಡ್ ಇಲ್ಲದಿರುವುದರಿಂದ ಭಯದ ವಾತಾವರಣಕ್ಕೆ ಕಾರಣವಾಗಿದ್ದು, ಇದು ವಿದ್ಯಾರ್ಥಿನಿಯರ ಅಭ್ಯಾಸದ ಮೇಲೂ ವ್ಯತಿರಿಕ್ತ ಪರಿಣಾಮಬೀರಿದೆ.
ವಿದ್ಯಾರ್ಥಿನಿಯರಿಗೆ ಸುರಕ್ಷತೆ, ಭದ್ರತೆ ಕೊರತೆ
ಈ ಕಾಲೇಜಿನಲ್ಲಿ ಕಲಿಯುವ ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೆ ಸೂಕ್ತ ಸುರಕ್ಷತೆ ಹಾಗೂ ಭದ್ರತೆ ಕೊರತೆ ಎದುರಾಗಿದೆ. ನಿರ್ಜನ ಪ್ರದೇಶದಲ್ಲಿ ದಾರಿ ಇರುವುದರಿಂದ ಅಂಜಿಕೆ-ಅಳುಕಿಲ್ಲದೇ ಒಂಟಿಯಾಗಿ ಕಾಲೇಜಿಗೆ ಹೋಗಿಬರುವುದು ವಿದ್ಯಾರ್ಥಿನಿಯರಿಗೆ ಕಷ್ಟಸಾಧ್ಯವಾಗಿದೆ. ಕಾಲೇಜಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗ ಸೇರಿದಂತೆ ಇನ್ನಿತರೆ ವಿಭಾಗದಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದು, ಅವರಿಗೆ ನಿರ್ಭಯದ ಕಲಿಕಾ ವಾತಾವರಣ ನಿರ್ಮಿಸುವಲ್ಲಿ ವಿವಿ ಆಡಳಿತ, ತಾಲೂಕು ಹಾಗೂ ಜಿಲ್ಲಾಡಳಿತಗಳು ನಿರ್ಲಕ್ಷö್ಯವಹಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ವಿದ್ಯಾರ್ಥಿನಿಯರ ಪಾಲಕರು ಆರೋಪಿಸಿದ್ದಾರೆ.
“ಮಳಿ ಬಂದ್ರ ಎಷ್ಟೋ ಸಲ ದರ್ಯಾಗ ಬಿದ್ದೀವ್ರಿ”
“ನಮ್ ಕಾಲೇಜಿಗೆ ಸರೀಗೆ ದಾರಿ ಇಲ್ರಿ. ಮಳಿ ಬಂತಂದ್ರ ಕಾಲೇಜು ತರಗತಿ ಡ್ರಾಪ್ ಆದಂಗನೆ. ಮಳಿ ಬಂದಾಗ ಕಾಲೇಜಿಗೆ ಬಂದು ಎಷ್ಟೋ ಸಲ ಜಾರಿ ಬಿದ್ದೀವಿ. ದರ್ಯಾಗ ಸುತ್ತಮುತ್ತ ಬೇಲಿ ಬೆಳೆದಿದ್ದು, ಕೌಂಪೌಂಡ್ ಇಲ್ದೇ ಇರೋದ್ರಿಂದ್ರ ಒಬ್ರೆ ಕಾಲೇಜಿಗೆ ಬರಾಕ ಅಂಜಿಕಿ ಬರ್ತೈತ್ರಿ. ಕುಷ್ಟಗಿ ರೋಡಿಗೆ ಬಂದು, ಇಬ್ರು-ಮೂವರು ಫ್ರೆಂಡ್ಸ್ ಸೇರಿ ಕಾಲೇಜಿಗೆ ಹೋಗ್ತೀವಿ. ಕಾಲೇಜು ರಸ್ತೆ ಮಾಡಿಸುವಂತೆ ನಾಲ್ಕಾರು ಸಲ ಹೋರಾಟ ಮಾಡಿದ್ದೀವಿ. ಇಲ್ಲಿವರೆಗೂ ಏನೂ ಆಗಿಲ್ಲ” ಎಂದು ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.