(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮೇ 13
ನಗರದಿಂದ 7ಕಿ.ಮೀ ಅಂತರದಲ್ಲಿರುವ ತಾಲೂಕಿನ ವಿರುಪಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಕೈಗೊಂಡು ನಾಲ್ಕಾರು ತಿಂಗಳಲ್ಲೇ ಕುಸಿದಿದೆ, ನಡುವೆ ಎಲ್ಲೆಂದರಲ್ಲಿ ಕಂಕರ್ ಕಿತ್ತುಹೋಗಿ, ಡಾಂಬರ್ ತೇಲಿ ತಗ್ಗು-ದಿನ್ನೆಗಳು ಬಿದ್ದಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವಾಲಯ ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ಅನುದಾನದಲ್ಲಿ, ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆ 3ರ ಅಡಿ, 7.03 ಕಿ.ಮೀ ಅಂತರದ ರಸ್ತೆಗೆ 475.85 ಲಕ್ಷ ರೂ.ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.
ನಗರದ ಕುಷ್ಟಗಿ ಮಾರ್ಗದಲ್ಲಿರುವ ಮುಖ್ಯ ರಸ್ತೆಯಿಂದ ವಿರುಪಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಗುತ್ತಿಗೆದಾರರು ಮನಬಂದAತೆ ಕಾರ್ಯನಿರ್ವಹಿಸಿದ ಪರಿಣಾಮ ಬೇಗನೇ ರಸ್ತೆ ಅಧ್ವಾನ ಸ್ಥಿತಿಗೆ ತಲುಪಿದೆ, ಆರಂಭದಲ್ಲಿ ರಸ್ತೆ ಕುಸಿದಂತೆ, ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಅಲ್ಲಲ್ಲಿ ತಗ್ಗು-ದಿನ್ನೆಗಳು ಉಂಟಾಗಿವೆ. ಅಂದಾಜು ಪತ್ರಿಕೆಯಂತೆ ಕಾರ್ಯನಿರ್ವಹಿಸದೇ ಇರುವುದರಿಂದ ರಸ್ತೆಗೆ ಈ ದುಃಸ್ಥಿತಿ ಬಂದಿದೆ. ಇನ್ನು ದೊಡ್ಡ ಮಳೆಯಾದರೆ ರಸ್ತೆ ಈ ಮೊದಲಿನಂತೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.