ನಮ್ಮ ಸಿಂಧನೂರು, ಮೇ 11
ಹಾಸನ ಸಂಸದ ಪ್ರಜ್ವಲ್ ರೇವಣ್ಣ ತನ್ನ ಬಳಿಗೆ ಸಹಾಯ ಯಾಚಿಸಿ ಬಂದ ಹಾಸನ ಜಿಲ್ಲೆಯ ನೂರಾರು ಹೆಣ್ಣುಮಕ್ಕಳನ್ನು, ಅಧಿಕಾರ ಮತ್ತು ಸಾಂದರ್ಭಿಕ ಲಾಭಪಡೆದು, ಲೈಂಗಿಕವಾಗಿ ಶೋಷಣೆ ಮಾಡಿದ್ದು, ಇದನ್ನು ಖಂಡಿಸಿ, ಮೇ 13 ರಂದು, “ಅಬಲೆಯರನ್ನು ಗೌರವಿಸೋಣ-ಅತ್ಯಾಚಾರಿಗೆ ತಕ್ಕ ಶಾಸ್ತಿ ಮಾಡೋಣ, “ಹಾಸನ ಚಲೋ” ಹಮ್ಮಿಕೊಳ್ಳಲಾಗಿದೆ ಎಂದು ಕೆಆರ್‌ಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿರುಪಾದಿ ಕೆ. ಗೋಮರ್ಸಿ ತಿಳಿಸಿದ್ದಾರೆ.
ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಂಸದ ಪ್ರಜ್ವಲ್ ರೇವಣ್ಣ, ಸಹಾಯ ಕೋರಿ ಬಂದ ಮಹಿಳೆಯರನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದು, ಶೋಷಣೆಗೆ ಒಳಗಾದ ಹೆಣ್ಣುಮಕ್ಕಳು ಇಲ್ಲಿ ಬಲಿಪಶುಗಳಾಗಿದ್ದು ಅವರದು ಯಾವುದೇ ತಪ್ಪಿಲ್ಲ. ಇದನ್ನು ನಾಗರಿಕ ಸಮಾಜ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಸಂತ್ರಸ್ತ ಮಹಿಳೆಯರ ಕುಟುಂಬಸ್ಥರು, ಸಂಬಂಧಿಕರು ಮತ್ತು ಪರಿಚಯಸ್ಥರು ಸೇರಿದಂತೆ ಇಡೀ ಸಮಾಜ ಈ ಮಹಿಳೆಯರೊಂದಿಗೆ ನಿಂತು ಅವರಲ್ಲಿ ಧೈರ್ಯ ತುಂಬುವ ವಾತಾವರಣ ಸೃಷ್ಟಿಸಬೇಕು ಎಂದು ಕೆಆರ್‌ಎಸ್ ಪಕ್ಷ ಹಾಸನ ಜಿಲ್ಲೆಯ ಜನರನ್ನೂ ಒಳಗೊಂಡು ಇಡೀ ಕರ್ನಾಟಕ ಜನತೆಗೆ ಮನವಿ ಮಾಡಿರುವ ಅವರು, ತನ್ನ ಜವಾಬ್ದಾರಿಯುತ ಸಂಸದ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು, ಅಸಹಾಯಕ ಹೆಣ್ಣು ಮಕ್ಕಳನ್ನು ಶೋಷಣೆಗೊಳಪಡಿಸಿದ್ದಲ್ಲದೇ, ವಿಡಿಯೋ ಮಾಡಿಕೊಂಡು ವಿಕೃತಿ ಮೆರೆದು ಪರಾರಿಯಾಗಿರುವ ಪ್ರಜ್ವಲ್ ರೇವಣ್ಣನನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ತನಿಖೆ ಮುಗಿಯವವರೆಗೂ ಅಧಿಕಾರಿಗಳನ್ನು ಬೇರೆ ಜಿಲ್ಲೆಗೆ ವರ್ಗಾಯಿಸಿ
ಪ್ರಜ್ವಲ್ ಎಸಗಿರುವಂತಹ ದುಷ್ಕೃತ್ಯಗಳು ಕೇವಲ ಪ್ರಭಾವೀ ಕೌಟುಂಬಿಕ ಹಿನ್ನೆಲೆಯ, ರಾಜಕೀಯವಾಗಿ ಗೊತ್ತುಗುರಿಯಿಲ್ಲದ ವ್ಯಕ್ತಿಗಳನ್ನು ರಾಜಕೀಯ ಪಕ್ಷಗಳು ಚುನಾವಣೆಗೆ ನಿಲ್ಲಿಸಿ, ವಾಮಮಾರ್ಗದಲ್ಲಿ ಚುನಾವಣೆ ಗೆಲ್ಲುವ ಕಾರಣಗಳಿಂದಾಗಿಯೇ ನಡೆಯುತ್ತಿರುವುದನ್ನು ನಾವು ಗಮನಿಸಬೇಕು. ಅದ್ದರಿಂದ ಪ್ರಜಾತಂತ್ರಕ್ಕೆ ಬಂದೆರಗಿರುವ ಈ ಘೋರ ಕಾಯಿಲೆಯನ್ನು ನಿರ್ಮೂಲನೆ ಮಾಡುವ ಸಂಕಲ್ಪಕ್ಕೆ ಮುಂದಾಗಬೇಕಿದೆ. ಹಾಗೆಯೇ, ಪೆನ್‌ಡ್ರೈವ್ ಪ್ರಕರಣವು ಪಾರದರ್ಶಕವಾಗಿ ತನಿಖೆ ಆಗಬೇಕು. ಪಾರದರ್ಶಕ, ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕಾದರೆ ಪ್ರಜ್ವಲ್ ರೇವಣ್ಣ ಕುಟುಂಬದ ಕೃಪಾಕಟಾಕ್ಷದಿಂದ ಹಾಸನ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಆ ಕುಟುಂಬದ ಋಣದಲ್ಲಿದ್ದೇವೆಂದು ಭಾವಿಸಿರುವ ಹಲವಾರು ನೌಕರರು ಹಾಗೂ ಅಧಿಕಾರಿಗಳನ್ನು ಈ ಪ್ರಕರಣದ ತನಿಖೆ ಮುಗಿಯುವವರೆಗೆ ಬೇರೆ ಜಿಲ್ಲೆಗೆ ವರ್ಗಾಯಿಸಿ ಪ್ರಕರಣದ ಸಾಕ್ಷö್ಯಗಳನ್ನು ತಿರುಚುವ, ಬೆದರಿಸುವುದನ್ನು ತಪ್ಪಿಸಬೇಕೆಂದು ಕೆಆರ್‌ಎಸ್ ಪಕ್ಷ ಆಗ್ರಹಿಸುತ್ತದೆ ಎಂದು ಅವರು ಹೇಳಿದ್ದಾರೆ.
ನ್ಯಾಯಾಂಗ ಉಸ್ತುವಾರಿಯಲ್ಲಿ ತನಿಖೆ ನಡೆಯಲಿ
ಇಂತಹ ಪ್ರಕರಣಗಳು ಮುಂದಿನ ದಿನಗಳಲ್ಲಿ ನಡೆಯಬಾರದು ಮತ್ತು ನಾಡಿನ ಮಹಿಳೆಯರ ಸುರಕ್ಷತೆಯಿಂದ ಇರಬೇಕೆಂದರೆ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ, ಅತ್ಯಾಚಾರಿ ಮತ್ತು ಈ ಕೃತ್ಯಗಳಲ್ಲಿ ಸಹಕರಿಸಿದವರಿಗೆ ಹಾಗೂ ಈ ವಿಡಿಯೋಗಳನ್ನು ಹರಿಬಿಟ್ಟಿರುವರು ಸೇರಿ ತನಿಖೆಗೆ ಒಳಪಡಬೇಕು. ತನಿಖೆ ನಡೆಸುತ್ತಿರುವ ಸರ್ಕಾರದ ಬಗ್ಗೆಯೂ ಸಂದೇಹಗಳಿದ್ದು, ನ್ಯಾಯಯುತ ತನಿಖೆ ನಡೆಯುತ್ತದೆ ಮತ್ತು ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇಲ್ಲ. ಆದ್ದರಿಂದ ಈ ಪ್ರಕರಣದ ತನಿಖೆ ನ್ಯಾಯಾಂಗದ ಉಸ್ತುವಾರಿಯಲ್ಲಿ ನಡೆಯಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.
ಮೊದಲು ದೂರು ಸಲ್ಲಿಸಿದ್ದು ಕೆಆರ್‌ಎಸ್ ಪಕ್ಷ
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಮೊದಲು ದೂರು ಸಲ್ಲಿಸಿದ್ದು ಕೆಆರ್‌ಎಸ್ ಪಕ್ಷ. ಈ ಪ್ರಕರಣ ಗಮನಕ್ಕೆ ಬಂದ ತಕ್ಷಣ ದಿನಾಂಕ ೨೭-೦೪-೨೦೨೪ ರಂದು ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಲಿಂಗೇಗೌಡ ಎಸ್.ಎಚ್. ಅವರು ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ನಮ್ಮ ದೂರಿನ ಆಧಾರದ ಮೇಲೆ ತಕ್ಷಣ ಕ್ರಮ ಕೈಗೊಂಡಿದ್ದರೆ, ಪ್ರಜ್ವಲ್ ರೇವಣ್ಣ ತಪ್ಪಿಸಿಕೊಳ್ಳುವುದನ್ನು ತಡೆಯಬಹುದಿತ್ತು. (ಈ ಪ್ರಕರಣದಲ್ಲಿ ಮೊದಲ ದೂರು ದಾಖಲಾಗಿದ್ದು ದಿನಾಂಕ ೨೮-೦೪-೨೦೨೪ ರಂದು). ರಾಜ್ಯದ ಪ್ರಮುಖ ಮೂರೂ ಪಕ್ಷಗಳು ಕೇವಲ ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಪಕ್ಷಗಳಿಗೆ ಮಹಿಳೆಯರ ಸುರಕ್ಷತೆ ಮತ್ತು ಗೌರವ ಆದ್ಯತೆ ಆಗಿರುವುದಿಲ್ಲ. ಈ ಪ್ರಕರಣದಿಂದ ರಾಜ್ಯದ ಮಾನ ಮರ್ಯಾದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ಹಾಗಾಗಿ ಕೂಡಲೇ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.