ಸಿಂಧನೂರು: 600ಕ್ಕೂ ಹೆಚ್ಚು ನರೇಗಾ ಕಾರ್ಮಿಕರಿಗೆ 1 ಪೆಂಡಾಲು ! ಕುಳಿತು ಉಣ್ಣಲೂ ನೆರಳಿನ ಅಭಾವ !!

Spread the love

(ಜನದನಿ : ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮೇ 9

ಬರೋಬ್ಬರಿ 600ಕ್ಕೂ ಹೆಚ್ಚು ನರೇಗಾ ಕಾರ್ಮಿಕರಿಗೆ ನೆರಳು ಕಲ್ಪಿಸಲು ಹಾಕಿದ್ದು ಒಂದೇ ಒಂದು ಪೆಂಡಾಲು !, ಕೆಲಸ ನಿರ್ವಹಿಸಿದ ಕೂಲಿಕಾರರು ನೆರಳಿನ ಅಭಾವದಿಂದಾಗಿ ಉರಿಬಿಸಿಲಲ್ಲೇ ಕುಳಿತು ಉಂಡರು !! ಇನ್ನೂ ಕೆಲವರು ತಾವೇ ತಂದಿದ್ದ ತಾಡಪಾಲ್‌ಗೆ ಮೊರೆ ಹೋದರೆ; ಅಲ್ಲಲ್ಲಿ ಇದ್ದ ಸಣ್ಣಪುಟ್ಟ ಗಿಡಗಳ ನೆರಳಿಗೆ ಕೆಲವರು ಉಣಬೇಕಾಯಿತು. ತಾಲೂಕಿನ ಹತ್ತಿಗುಡ್ಡ ಗ್ರಾಮದ ಕೆರೆಯಲ್ಲಿ ಗಾಂಧಿನಗರ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳ ನರೇಗಾ ಕೂಲಿಕೆಲಸದವರು ಉರಿಬಿಸಿಲಲ್ಲಿ ಗುರುವಾರ ಪಾಡು ಪಟ್ಟಿದ್ದು ಹೀಗೆ..
ಸಿಂಧನೂರು ತಾಲೂಕಿನ ಗಾಂಧಿನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಹತ್ತಿಗುಡ್ಡ ಗ್ರಾಮದ ಕೆರೆಯಲ್ಲಿ ಹೂಳೆತ್ತುವ ಕೆಲಸ ನೀಡಲಾಗಿದ್ದು, ಕಳೆದ ಹಲವು ದಿನಗಳಿಂದ ಬೆಳಿಗ್ಗೆ 8 ಗಂಟೆಯಿಂದ 12 ಗಂಟೆಯವರೆಗೆ ಕಾರ್ಮಿಕರು ಕೆಲಸ ನಿರ್ವಹಿಸುತ್ತಾ ಬಂದಿದ್ದಾರೆ. ಬಿಸಿಲಿನ ಕಾರಣಕ್ಕೆ ನರೇಗಾ ಕೆಲಸ ನಿರ್ವಹಿಸುವ ಮುಂಚೆ ಗ್ರಾಮ ಪಂಚಾಯಿತಿಯವರು ಕೂಲಿಕಾರರಿಗೆ ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸಬೇಕೆನ್ನುವ ನಿಯಮಾವಳಿಗಳಿದ್ದರೂ ಪಾಲಿಸದೇ ಇರುವುದು ಕಂಡುಬಂತು. ಕೆಲಸಕ್ಕೆ ಹಾಜರಾದ ಅಂದಾಜು 600 ಕ್ಕೂ ಹೆಚ್ಚು ಜನರಿಗೆ ಸಾಕಷ್ಟು ನೀರು, ನೆರಳಿನ ವ್ಯವಸ್ಥೆ ಇಲ್ಲದ ಪರಿಣಾಮ ಕೆಲವರು ಪರದಾಡಿದರು. “ಈ ಉದ್ಯೋಗ ಖಾತ್ರಿ ಕೆಲಸಕ್ಕ ದಿನವೂ ಇಪ್ಪತ್ತು-ಮೂವತ್ತು ರೂಪಾಯಿ ಕೊಟ್ಟು ಇಲ್ಲಿಗೆ ಬರಬೇಕ್ರಿ, 349 ರೂಪಾಯಿ ಕೂಲಿ ಐತಿ. ಅದು ಕೂಡ ತಿಂಗ್ಳಗಟ್ಲೆ ಕಾಯ್ಬೇಕು. ಈ ಬಿಸಲಾಗ ಕೆಲಸಾ ಮಾಡ್ಬೇಕಂದ್ರ ಮೈ ತಿರಿಗಿದೆಂಗ ಆಗ್ತೈತಿ” ಎಂದು ಕೂಲಿಕಾರ ಮಹಿಳೆಯೊಬ್ಬರು ಅಳಲು ತೋಡಿಕೊಂಡರು.

Namma Sindhanuru Click For Breaking & Local News

ಬಿಸಿಲಲ್ಲೇ ನರೇಗಾ ಕೆಲಸ ?
ಕಳೆದ ಹಲವು ದಿನಗಳಿಂದ ತಾಲೂಕಿನಲ್ಲಿ 45 ಡಿಗ್ರಿ ಸೆಲ್ಷಿಯಸ್‌ಗೂ ಹೆಚ್ಚು ತಾಪಮಾನ ದಾಖಲಾಗಿದ್ದು, ಬಿಸಿಲಿನಲ್ಲಿ ಸಂಚರಿಸದಂತೆ, ಒಂದು ವೇಳೆ ಕೆಲಸ ಕಾರ್ಯಗಳಿಗೆ ಹೊರಗಡೆ ಹೋಗಬೇಕಾದರೆ ಅಗತ್ಯ ಮನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದರೂ, ನರೇಗಾದಡಿ ಬಿಸಿಲಿನಲ್ಲಿ ಕೂಲಿಕಾರ್ಮಿಕರಿಗೆ ಕೆಲಸಕ್ಕೆ ಬಳಸಿಕೊಳ್ಳುತ್ತಿರುವುದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ. ಇತ್ತೀಚಿಗೆ ಹುಡಾ ಗ್ರಾಮದಲ್ಲಿ ತಾಪಮಾನದ ಕಾರಣದಿಂದ ನಾಲ್ವರು ಮೃತಪಟ್ಟ ಘಟನೆ ಹಸಿಯಾಗಿರುವಾಗಲೇ ಉರಿಬಿಸಿಲಲ್ಲಿ ನರೇಗಾ ಕಾಮಗಾರಿ ನಿರ್ವಹಿಸುವುದರಿಂದ ಕಾರ್ಮಿಕರಿಗೆ ಅನಾರೋಗ್ಯ ಕಾಡಿ, ಅಸ್ವಸ್ಥರಾದರೆ ಹೊಣೆ ಯಾರು ಎಂಬುದು ಕಾರ್ಮಿಕರ ಪ್ರಶ್ನೆಯಾಗಿದೆ.

Namma Sindhanuru Click For Breaking & Local News

ನೀರು, ನೆರಳಿಗೆ ಪರಿತಾಪ
ಗಾಂಧಿನಗರ ಗ್ರಾಮ ಪಂಚಾಯಿತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ನರೇಗಾ ಕೆಲಸಕ್ಕೆ ಹಾಜರಾಗಿದ್ದರಿಂದ ಅವರಿಗೆ ಅಗತ್ಯವಿರುವಷ್ಟು ಕುಡಿವ ನೀರಿನ ಸೌಕರ್ಯ ಇಲ್ಲದೇ ಮತ್ತು ನೆರಳಿನ ಅಭಾವದಿಂದ ಪರಿತಪಿಸಿದರು. ಇನ್ನೇನು ಎರಡ್ಮೂರು ದಿನ ಕೆಲಸವಿದ್ದು, ಅಷ್ಟರೊಳಗೆ ನಮಗೆ ಮೂಲ ಸೌಕರ್ಯ ಕಲ್ಪಿಸುವುದು ಅನುಮಾನ, ಹಲವು ದಿನಗಳಿಂದ ಇದೇ ಪರಿಸ್ಥಿತಿ ನಡೆಯುತ್ತ ಬಂದಿದೆ. ನಾವೇ ಮನೆಯಿಂದ ನೀರು ತಂದು ಕುಡಿದು ಹೋಗುತ್ತೇವೆ. ಆದರೆ ಏನೇನೋ ಲೆಕ್ಕ ಬರೆದು ದುಡ್ಡು ತಿನ್ನುವವರು ಬೇರೆ ಎಂದು ಕಾರ್ಮಿಕರು ದೂರಿದರು.

Namma Sindhanuru Click For Breaking & Local News

ಟ್ರ್ಯಾಕ್ಟರ್ ಹಣ ಬಿಡುಗಡೆಯಾಗಿಲ್ಲ
ಕೆರೆಯ ಹೂಳಿನ ಮಣ್ಣನ್ನು ಪುಟ್ಟಿಗಳಲ್ಲಿ ತುಂಬಿ ಕಾರ್ಮಿಕರು ಟ್ರ್ಯಾಕ್ಟರ್‌ ಹಾಕುತ್ತಾರೆ. ಟ್ರ್ಯಾಕ್ಟರ್‌ನವರು ಈ ಮಣ್ಣನ್ನು ಬೇರೆಡೆಗೆ ಹಾಕುತ್ತಾರೆ. ನರೇಗಾದಡಿ (ಬಿಒಸಿ) ಈ ಕಾರ್ಯಕ್ಕೆ 34 ಟ್ರ್ಯಾಕ್ಟರ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಒಂದು ಟ್ರಿಪ್‌ಗೆ 120 ರೂಪಾಯಿ ದರ ನಿಗದಿಗೊಳಿಸಲಾಗಿದೆ. ಈ ಹಿಂದೆ ಗಾಂಧಿನಗರ ಗ್ರಾ.ಪಂ.ನಿಂದ ನರೇಗಾದಡಿ ಬಹಳಷ್ಟು ಟ್ರ್ಯಾಕ್ಟರ್‌ಗಳನ್ನು ಬಳಸಿಕೊಳ್ಳಲಾಗಿದ್ದು, 2 ವರ್ಷದ ಹಣ ಇಲ್ಲಿಯವರೆಗೂ ಪಾವತಿಯಾಗಿಲ್ಲ ಎಂದು ಟ್ರ್ಯಾಕ್ಟರ್‌ ಮಾಲೀಕರು ಹೇಳುತ್ತಾರೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *