ನಮ್ಮ ಸಿಂಧನೂರು, ಮೇ 2
ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಹೆಚ್ಚಿನ ತಾಪಮಾನ ದಾಖಲಾದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರು ನಾಗರಿಕರು ಮುನ್ನೆಚ್ಚರಿಕೆ ವಹಿಸಲು ಮನವಿ ಮಾಡಿದ್ದಾರೆ.
ಈ ಕುರಿತು ಅವರು ಟ್ವೀಟ್ ಮಾಡಿ “ ಇಡೀ ಕರ್ನಾಟಕದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿರುವುದರಿಂದ ಬಿಸಿಗಾಳಿಯೂ ಕೂಡ ಉಲ್ಬಗೊಳ್ಳುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆಯಿಂದ ಮುನ್ಸೂಚನೆ ಬಂದಿದೆ. ಹಾಗಾಗಿ ನಾಗರಿಕರು ಮಧ್ಯಾಹ್ನ 12 ಗಂಟೆಯಿಂದ 3 ರಿಂದ 4 ಗಂಟೆಯವರೆಗೆ ಹೊರಗಡೆ ಹೋಗುವುದನ್ನು ತಪ್ಪಿಸಿ, ಹೊರಗಡೆ ಹೋಗಬೇಕಾದ ಸಂದರ್ಭ ಬಂದರೆ, ಜೊತೆಗೆ ಶುದ್ಧವಾದ ಕುಡಿವ ನೀರಿನ ಬಾಟಲ್ ಒಯ್ಯಬೇಕು. ಬಿಸಿಲಿಗೆ ಓಡಾಡಬೇಕಾದ ಅನಿವಾರ್ಯತೆ ಸೃಷ್ಟಿಯಾದರೆ ಛತ್ರಿಯನ್ನು ಬಳಸಬೇಕು, ಇಲ್ಲವೇ ನೆರಳಿರುವ ಪ್ರದೇಶ ವ್ಯಾಪ್ತಿಯಲ್ಲಿ ಸಂಚರಿಸಬೇಕು. ಬಾಯಾರಿಕೆ ಅನಿಸ್ತಿಲ್ಲ ಅಂತ ಅನಿಸಿದರೂ ಆವಾಗಾವಾಗ ಜೊತೆಯಲ್ಲಿನ ಒಯ್ದ ಬಾಟಲ್ ನೀರನ್ನು ಗುಟುಕು ಗುಟುಕು ಕುಡಿಯಿರಿ. ಹೀಗೆ ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ಬಿಸಿಗಾಳಿಯಿಂದ ತಪ್ಪಿಸಿಕೊಳ್ಳುವ ಹಿನ್ನೆಲೆಯಲ್ಲಿ ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೂಚನೆ ನೀಡಲಾಗಿದ್ದು, ಓಆರ್‌ಎಸ್ ಪ್ಯಾಕೆಟ್‌ಗಳು ಸಂಗ್ರಹಣೆ ಸೇರಿದಂತೆ ಇನ್ನಿತರೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿರುವ ಅವರು ಪ್ರಾಣಿ, ಪಕ್ಷಿಗಳು ಬಂದು ನೀರು ಕುಡಿಯಲು ತಮ್ಮ ಮನೆಯ ಮುಂದೆ ನೀರಿನ ಬಕೆಟ್ ಅಥವಾ ಡಬ್ಬಾದಲ್ಲಿ ನೀರನ್ನು ಹಾಕಿಡುವ ಮೂಲಕ ಹಕ್ಕಿ-ಪಕ್ಷಿಗಳ ನೀರಿನ ದಾಹ ತಣಿಸಲು ಸಹಕರಿಸಿ” ಎಂದು ಮನವಿ ಮಾಡಿದ್ದಾರೆ.