ಸಿಂಧನೂರು : ಬೇಸಿಗೆಯಲಿ ಬಾಯಾರಿಕೆ, ಏರುತಿದೆ ಮನೆಯ ಕುಡಿಯುವ ನೀರಿನ ಬಜೆಟ್ !

Spread the love

(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಎಪ್ರಿಲ್ 30

ಕಳೆದ ಒಂದು ತಿಂಗಳಿಂದ ನಗರದ ಬಹಳಷ್ಟು ಕುಟುಂಬಗಳ ಮನೆಯ ಕುಡಿವ ನೀರಿನ ಬಜೆಟ್ ಏರುತ್ತಿದೆ. ಅವಿಭಕ್ತ ಕುಟುಂಬದಲ್ಲಂತೂ ದಿನವೂ ಒಬ್ಬರು ಕುಡಿವ ನೀರು ತರಲು ಕಾಯಂ ಆಗಿ ನೇಮಕವಾದಂತಿದೆ. ಉರಿಬಿಸಿಲಿನಿಂದಾಗಿ ಪದೇ ಪದೆ ಬಾಯಾರಿಕೆ ಸಾಮಾನ್ಯವಾಗಿದ್ದು, ದಾಹ ತಣಿಸಲು ಜನರು ನೀರಿಗೆ ಮೊರೆ ಹೋಗುತ್ತಿದ್ದಾರೆ. ದಿನವೂ ಕನಿಷ್ಠ 50 ರೂಪಾಯಿ ಕುಡಿವ ನೀರಿಗೆ ಖರ್ಚು ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ನೆರಳಿನಲ್ಲಿ ಕುಳಿತು ಕೆಲಸ ಮಾಡುವವರು ಅಂದಾಜು ದಿನವೂ 4 ಲೀಟರ್‌ಗೂ ಹೆಚ್ಚು ನೀರು ಕುಡಿಯುತ್ತಿದ್ದರೆ, ಇನ್ನೂ ಕೆಲವೊತ್ತು ಬಿಸಿಲಿನಲ್ಲಿ ಕಾರ್ಯನಿರ್ವಹಿಸುವವರಿಗೆ 6 ಲೀಟರ್‌ಗೂ ಹೆಚ್ಚು ನೀರು ಸಾಲುತ್ತಿಲ್ಲ. ಬಿಸಿಲ ಧಗೆಯ ಕಾರಣದಿಂದಾಗಿ ಪದೇ ಪದೆ ನೀರಡಿಕೆಯಾಗುತ್ತಿದ್ದು, ಎಷ್ಟು ನೀರು ಕುಡಿದರೂ ಸಮಾಧಾನವಾಗುತ್ತಿಲ್ಲ, ಮೇಲಿಂದ ಮೇಲೆ ನೀರು ಕುಡಿಯ ಬೇಕಿನಿಸುತ್ತಿದೆ ಎಂದು ಸಾರ್ವಜನಿಕರೊಬ್ಬರು ಹೇಳುತ್ತಾರೆ. ಕುಷ್ಟಗಿ ಮಾರ್ಗದ ರಸ್ತೆ ಬಳಿಯಿರುವ ಸಾರ್ವಜನಿಕ ಕುಡಿವ ನೀರಿನ ಕೆರೆಯಿಂದ ನಗರದ 31 ವಾರ್ಡ್ ಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಕೆಲವರು ಇದೇ ನೀರನ್ನು ಕಾಯಿಸಿ, ಆರಿಸಿ, ಸೋಸಿ ಕುಡಿಯುತ್ತಿದ್ದಾರೆ. ಇನ್ನೂ ಕೆಲವರು ಫಿಲ್ಟರ್ ನೀರಿಗೆ ಮೊರೆ ಹೋಗಿದ್ದು, ನಗರದ ಖಾಸಗಿ ಪ್ಲಾಂಟ್‌ಗಳಿದ ದಿನವೂ ನೀರು ತರುವುದು ವಾಡಿಕೆಯಾಗಿ ಪರಿಣಮಿಸಿದೆ.

Namma Sindhanuru Click For Breaking & Local News

ದಿನವೂ ಮರ‍್ನಾಲ್ಕು ಕ್ಯಾನ್ ಖಾಲಿ !
10 ರಿಂದ 15 ಜನರು ಸದಸ್ಯರಿರುವ ಕುಟುಂಬದಲ್ಲಿ ಕೆಲವೊಂದು ಬಾರಿ ಮರ‍್ನಾಲ್ಕು ಕ್ಯಾನ್ ಕುಡಿವ ನೀರು ಖಾಲಿಯಾಗುತ್ತಿದೆ. ಬಿಸಿಲಿನ ಕಾರಣ ಬಾಯಾರಿಕೆಯಿಂದಾಗಿ ಹೆಚ್ಚು ನೀರು ಕುಡಿಯುವುದು ಅನಿವಾರ್ಯ ವಾಗಿರುವುದರಿಂದ ಫಿಲ್ಟರ್ ನೀರು ಖಾಲಿಯಾಗುತ್ತಿದೆ.
ನೀರಿನ ರೇಟು
ನಗರದ ಖಾಸಗಿಯವರ ನೀರಿನ ಘಟಕವೊಂದರಲ್ಲಿ 20 ಲೀಟರ್ ನೀರಿಗೆ 12 ರೂಪಾಯಿ, 25 ಲೀಟರ್‌ಗೆ 15 ರೂಪಾಯಿ, ಒಂದು ಕೊಡ ನೀರಿಗೆ 10 ರೂಪಾಯಿ, 2 ಲೀಟರ್ ಬಾಟಲ್‌ಗೆ 6 ರೂಪಾಯಿ, 1 ಲೀಟರ್ ಬಾಟಲ್‌ಗೆ 3 ರೂಪಾಯಿ, 20 ಲೀಟರ್ ಕೋಲ್ಡ್ ವಾಟರ್‌ಗೆ 30 ರೂಪಾಯಿ, 25 ಲೀಟರ್ ಕೋಲ್ಡ್ ವಾಟರ್‌ಗೆ 35 ರೂಪಾಯಿ ಹಾಗೂ 2 ಲೀಟರ್ ಕೋಲ್ಡ್ ನೀರಿಗೆ 8 ರೂಪಾಯಿ, 1 ಲೀಟರ್‌ಗೆ 5 ರೂಪಾಯಿ ದರ ನಿಗದಿಗೊಳಿಸಲಾಗಿದೆ.

Namma Sindhanuru Click For Breaking & Local News

ಬೀಗರಿಗೆ ‘ನೀರು’ ಕುಡಿಸುವುದೇ ಸವಾಲು !
ಈ ಬಾರಿ ಬೇಸಿಗೆಯಲ್ಲಿ ಬಹಳಷ್ಟು ಮದುವೆಗಳು ನಡೆಯುತ್ತಿದ್ದು, ಬೀಗರಿಗೆ ಮದುವೆ ಮನೆಯವರು ನೀರು ಹೊಂದಿಸಲು ಹರಸಾಹಸ ಪಡುತ್ತಿದ್ದಾರೆ. ಇದರಿಂದಾಗಿ ಖಾಸಗಿ ವಾಟರ್ ಪ್ಲಾಂಟ್‌ನವರಿಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಅನಿವಾರ್ಯವಾಗಿ ಅಡ್ವಾನ್ಸ್ ಬುಕಿಂಗ್ ಮಾಡಬೇಕಿದೆ. ಇನ್ನೂ ಮದುವೆ ಮನೆಯಲ್ಲಿ ಗಂಟೆಯೊಳಗೆ ಹತ್ತಾರು ವಾಟರ್ ಕ್ಯಾನ್‌ಗಳು ಫಟಾ ಫಟ್ ಖಾಲಿಯಾಗುತ್ತಿವೆ.
ನೀರಿನ ಬಾಟಲ್, ಪ್ಯಾಕೆಟ್ ಬಿಕರಿ
ಇನ್ನೂ ರಾಜಕೀಯ ಸಮಾವೇಶದಲ್ಲಿ ಬಿಸಿಲಿನ ಧಗೆಯ ಕಾರಣದಿಂದಾಗಿ ಸಾವಿರಾರು ನೀರಿನ ಬಾಟಲ್‌ಗಳು, ನೀರಿನ ಪ್ಯಾಕೆಟ್‌ಗಳು ಬಿಕರಿಯಾಗುತ್ತಿವೆ. ಇತ್ತೀಚೆಗೆ ನಡೆದ ರಾಜಕೀಯ ಪಕ್ಷವೊಂದರ ಸಾರ್ವಜನಿಕ ಸಮಾವೇಶದಲ್ಲಿ ಲಕ್ಷಕ್ಕೂ ಮಿಗಿಲು ನೀರಿನ ಪ್ಯಾಕೆಟ್‌ಗಳು ಬಿಕರಿಯಾಗಿವೆ ಎಂದು ಹೇಳಲಾಗುತ್ತಿದೆ. ಉರಿಬಿಸಲು ಪದೇ ಪದೆ ಬಾಯಾರಿಕೆ ಕಾರಣವಾಗುತ್ತಿದ್ದು, ನೀರಿನ ದಾಹ ಹೆಚ್ಚಿಸುತ್ತಿರುವುದಂತೂ ನಿಜ.
ಫಿಲ್ಟರ್ ನೀರಿಗೆ ಹೆಚ್ಚಿದ ಬೇಡಿಕೆ
“ಕಳೆದ ವರ್ಷಕ್ಕಿಂತ ಈ ವರ್ಷ ಫಿಲ್ಟರ್ ಕುಡಿವ ನೀರಿಗೆ ಬೇಡಿಕೆ ಹೆಚ್ಚಿದೆ. ಮದುವೆ ಕಾರ್ಯಕ್ರಮವೊಂದಕ್ಕೆ ಇವತ್ತು 170 ಕ್ಯಾನ್ ಆರ್ಡರ್ ಬಂದಿವೆ. ಈ ಬಾರಿ ಹೆಚ್ಚು ಮದುವೆಗಳು ಇರುವುದರಿಂದ ದಿನವೂ ಎರಡ್ಮೂರು ಆರ್ಡರ್‌ಗಳು ಸಾಮಾನ್ಯವಾಗಿದೆ. ಈ ನಡುವೆ ಸಾರ್ವಜನಿಕರು ಫಿಲ್ಟರ್ ನೀರನ್ನು ಇಲ್ಲಿಂದ ಒಯ್ಯುತ್ತಾರೆ. ಕರೆಂಟ್ ಬಿಲ್, ಕೆಲಸಗಾರರ ಪಗಾರ, ಪ್ಲಾಂಟ್ ನಿರ್ವಹಣೆ ಸೇರಿದಂತೆ ಹಲವು-ಖರ್ಚು ವೆಚ್ಚಗಳಿಗಾಗಿ ಕಳೆದ ವರ್ಷದಿಂದಲೇ ನೀರಿನ ದರವನ್ನು ಪರಿಷ್ಕರಿಸಲಾಗಿದೆ” ಎಂದು ನೀರಿನ ಘಟಕವೊಂದರ ಸಿಬ್ಬಂದಿ ಹೇಳುತ್ತಾರೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *