(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಎಪ್ರಿಲ್ 30
“ಎಂಥಾ ಬಿಸಿಲ್ರಿ ಇದು ! ನಾಲ್ಕು ಹೆಜ್ಜೆ ನಡೇದ್ರೊಳಗ ಮೈತುಂಬ ಬೆವ್ರು ಇಳ್ದು ಅಂಗಿ ತೋಯ್ಯಾಕತ್ತಾö್ಯದ, ಇನ್ನು ಅನಕಂಡ ಕಡೆ ಹೋಗ್ಬೇಕಂದ್ರ ತಲೆ ತಿರಿಗಿದೆಂಗ ಆಗ್ತೈತಿ. ಇಂತಾ ಬಿಸ್ಲು ಬಿದ್ರ ಏನ್ಮಾಡಬೇಕ್ರಿ. ನೆಳ್ಳು ಅಂಬೋದು ಬಂಗಾರ ಆಗೈತ್ರಿ ನೋಡ್ರಿ. ಒಂಚೂರೂ ಗಾಳಿ ಬೀಸವಲ್ತು, ಒಂದೇ ಸವನೆ ಮೈಮೇಲೆ ಕೆಂಡ ಉಗ್ಗಿದೆಂಗ ಆಗ್ತೈತಿ’’ ನಗರದ ಹಿರಿಯ ನಾಗರಿಕರೊಬ್ಬರು ಮಧ್ಯಾಹ್ನದ ಬಿರುಬಿಸಿಲಿನ ಬಗ್ಗೆ ಮಂಗಳವಾರ ಉದ್ಘರಿಸಿದ್ದು ಹೀಗೆ.
ಸಿಂಧನೂರು ನಗರದಲ್ಲಿ ಮಧ್ಯಾಹ್ನ 1 ಗಂಟೆ ಆಸುಪಾಸು 43 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾದ ಬೆನ್ನಲ್ಲೇ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕಿದರು. ನಗರದ 31 ವಾರ್ಡ್ ಗಳ ವ್ಯಾಪ್ತಿಯಲ್ಲೂ ಬಹುತೇಕ ಕಡೆ ಅನಿವಾರ್ಯ ಕೆಲಸ ಕಾರ್ಯಗಳಿಗೆ ಮಾತ್ರ ಜನರು ಹೊರಬಂದದ್ದು ಕಂಡುಬಂತು. ಕೆಲವರು ನಾಲ್ಕು ಹೆಜ್ಜೆ ಹಾಕುವಷ್ಟರಲ್ಲೇ ಮೈತುಂಬ ಬೆವರು, ನೀರ ದಾಹ ಅನುಭವಿಸಿದರು. ಅಂಗೈಯಿಂದ ಹಣ್ಣೆತ್ತಿವರೆಗೂ ಉರಿ ಬಿಸಿಲು ಚುರುಕು ಮುಟ್ಟಿಸಿತು.
ಗಾಂಧಿಸರ್ಕಲ್, ಬಸವ ಸರ್ಕಲ್, ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್ ಹಾಗೂ ಕನಕದಾಸ ಸರ್ಕಲ್ ಸೇರಿದಂತೆ ಹಲವು ಕಡೆ ಜನರು ಬಿಸಿಲಿಗೆ ಅಂಜಿ ನೆರಳಿನತ್ತ ಬಡ ಬಡನೇ ಧಾವಿಸಿದರು. ಕೆಲಸ ಕಾರ್ಯಗಳಿಗೆ ಆಗಮಿಸಿದ್ದ ಜನರು ತಹಸೀಲ್ ಕಾರ್ಯಾಲಯದ ಆವರಣದಲ್ಲಿ ಧಗೆಗೆ ಹೆದರಿ ಗಿಡದ ಆಶ್ರಯ ಪಡೆದರು. ಇನ್ನು ಎಪಿಎಂಸಿಯ ಬಹುತೇಕ ಕಡೆ ಸಿಸಿ ರಸ್ತೆಗಳು ಇರುವ ಕಾರಣ ಎಲ್ಲ ಸಿಸಿ ರಸ್ತೆಗಳೂ ಬಿಸಿಲಿಗೆ ಕಾದ ಹೆಂಚಿನಂತಾಗಿದ್ದವು. ವರ್ತಕರು ಹಾಗೂ ಕೂಲಿಕಾರ್ಮಿಕರು ಬೆಳಿಗ್ಗೆ 11 ಗಂಟೆಯಿಂದಲೇ ಕೆಲಸ ಕಾರ್ಯಗಳನ್ನು ಕೈಬಿಟ್ಟು ವಿಶ್ರಾಂತಿಗೆ ಮೊರೆ ಹೋದರು.
ಇನ್ನು ಆದರ್ಶ ಕಾಲೋನಿಯ ಹಲವು ಬಡಾವಣೆಯ ರಸ್ತೆಗಳು ಜನ ಸಂಚಾರವಿಲ್ಲದೇ ಬಿಕೋ ವಾತಾವರಣ ಕಂಡುಬಂತು. ಮನೆಯ ಮುಂದೆ ಇರುವ ಮರಗಳ ಕೆಳಗೆ ಗಾಡಿಗಳನ್ನು ನಿಲ್ಲಿಸಿದ್ದರೆ, ಇನ್ನೂ ಕೆಲವರು ಗಿಡದ ನೆರಳಿ ಆಶ್ರಯ ಪಡೆದು ಕುಳಿತಿದ್ದು ಕಂಡುಬಂತು. ಅಂತೂ ಇಂತು ಈ ಬಾರಿಯ ಬಿಸಿಲ ಧಗೆ ಜನಸಾಮಾನ್ಯರಿಗೆ ಚುರುಕು ಮೂಡಿಸಿರುವುದಂತೂ ನಿಜ. ಅಲ್ಲದೇ ಮಕ್ಕಳು, ವೃದ್ದರು ಹಾಗೂ ಗರ್ಭಿಣಿಯರು ಹಾಗೂ ಬಾಣಂತಿಯರು ಬಿಸಿಲಿನ ಕಾರಣದಿಂದ ಅನಾರೋಗ್ಯ ಸಮಸ್ಯೆಗೀಡಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೆಸ್ಟಿಲ್ಲದ ಫ್ಯಾನುಗಳು !
ಮನೆಗಳಲ್ಲಿ ಫ್ಯಾನುಗಳಿಲ್ಲದೇ ಕ್ಷಣವೊತ್ತು ಕುಳಿತುಕೊಳ್ಳಲು ಆಗದಂತಹ ಪರಿಸ್ಥಿತಿ ಉಂಟಾಗಿದೆ. ಅಪ್ಪಿತಪ್ಪಿ ವಿದ್ಯುತ್ ಕೈಕೊಟ್ಟರಂತೂ ಸಣ್ಣ ಮಕ್ಕಳ ಚೀರಾಟ ಕೇಳಿಬಂದರೆ, ಜನರು ರಾತ್ರಿ ಹೊತ್ತು ಟೆರೇಸ್ ಮೇಳೆ ಬಂದು ಕುಳಿತುಕೊಳ್ಳುವಂತಾಗಿದೆ. ದಿನದಿಂದ ದಿನಕ್ಕೆ ಉಷ್ಣಾಂಶದ ಪ್ರಮಾಣ ಏರಿಕೆಯಾಗುತ್ತಿರುವುದರ ಜೊತೆಗೆ ಬಿಸಿಗಾಳಿ ಜನಸಾಮಾನ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಬಿಸಿಗಾಳಿಯಿಂದ ಮುಕ್ತಿ ಯಾವಾಗ ?
ಉಷ್ಣ ಮಾರುತಗಳಿಂದಾಗಿ ಮೇ ೩ರವರೆಗೂ ಬಿಸಿಗಾಳಿ ಇರಲಿದೆ, ಇನ್ನೂ ದೇಶದ ಹಲವು ಕಡೆಗಳಲ್ಲಿ ೪೫.೬ ಡಿಗ್ರಿ ಸೆಲ್ಷಿಯಸ್‌ವರೆಗೂ ಉಷ್ಣಾಂಶ ದಾಖಲಾಗಿದ್ದು, ಹಾಗಾಗಿ ಅಲ್ಲಿಯವರೆಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅನಿವಾರ್ಯ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ಬಾರಿ ಕಡಿಮೆ ಮಳೆಯಿಂದಾಗಿ ಭೂಮಿ ಬಿಸಿಲಿಗೆ ಬೇಗ ಕಾಯುತ್ತಿದ್ದು, ಸ್ವಲ್ಪ ಗಾಳಿ ಬೀಸಿದರೆ ಸಾಕು ಸೆಕೆ ತಟ್ಟುತ್ತಿದೆ. ಹೀಗಾಗಿ ಜನರು ಬಿಸಿಲಿನಿಂದ ಪಾರಾಗಲು ಇನ್ನಿಲ್ಲದ ಹರಸಾಹಸ ಮಾಡುತ್ತಿದ್ದಾರೆ.