(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಎಪ್ರಿಲ್ 28
ಕೊಪ್ಪಳ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರ ಪರ ಬಹಿರಂಗ ಪ್ರಚಾರದ ಹಿನ್ನೆಲೆಯಲ್ಲಿ ಸಿಂಧನೂರಿನಲ್ಲಿ ಆಯೋಜಿಸಿರುವ ಸಮಾವೇಶಕ್ಕೆ ಸಿಎಂ ಅವರು ಭಾನುವಾರ (ಎಪ್ರಿಲ್ 28) ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ಪಿಡಬ್ಲ್ಯುಡಿ ಕ್ಯಾಂಪ್‌ನ ಜೂನಿಯರ್ ಕಾಲೇಜು ಆವರಣದಲ್ಲಿ ಭರ್ಜರಿ ಸಿದ್ಧತೆ ನಡೆಸಿರುವುದು ಕಂಡುಬಂತು. ಸಿಂಧನೂರು, ಸಿರುಗುಪ್ಪ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾವಿರಾರು ಸಂಖ್ಯೆಯ ಜನರು ಬಹಿರಂಗ ಸಮಾವೇಶದಲ್ಲಿ ಭಾಗವಹಿಸಲಿದ್ದು, ಬಿಸಿಲಿನ ಕಾರಣದ ಹಿನ್ನೆಲೆಯಲ್ಲಿ ಸಂಜೆ 6 ಗಂಟೆಗೆ ಸಮಾವೇಶ ನಡೆಯಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಕಳೆದು ನಾಲ್ಕಾರು ದಿನಗಳಿಂದ ಬಿಸಿಲ ಧಗೆ ಹೆಚ್ಚಿದ್ದು, ಈ ಕಾರಣದಿಂದ ಸಾಯಂಕಾಲ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಈ ಹಿಂದೆ ತಾವು ಸ್ಪರ್ಧಿಸಿದ್ದ ಕಾರಣದಿಂದಾಗಿ ಇಡೀ ಕ್ಷೇತ್ರದ ರಾಜಕೀಯ ಆಳ-ಅಗಲವನ್ನು ಬಲ್ಲವರಾಗಿರುವ ಸಿಎಂ ಸಿದ್ದರಾಮಯ್ಯ ಅವರು ಈ ಭಾಗದ ಹಲವು ಮುಖಂಡರೊಂದಿಗೆ ಇಂದಿಗೂ ಉತ್ತಮ ಒಡನಾಟವನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ತಾವು ಲೋಕಸಭೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಸಿಂಧನೂರು ತಾಲೂಕಿನಲ್ಲಿ ಮತದಾರರು ಅತಿ ಹೆಚ್ಚು ಲೀಡ್ ಕೊಟ್ಟಿದ್ದನ್ನು ಅವರು ಬಹಿರಂಗ ಸಮಾರಂಭದಲ್ಲಿ ಈ ಹಿಂದೆ ಪ್ರಸ್ತಾಪಿಸಿದ್ದಿದೆ.
ಬಲ ಪ್ರದರ್ಶನ:
ಸಿರುಗುಪ್ಪ, ಮಸ್ಕಿ ಹಾಗೂ ಸಿಂಧನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ವಿಜಯಶಾಲಿಯಾಗಿರುವುದರಿಂದ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಬೆಂಬಲಿಗರು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ. ಪಂಚ ಗ್ಯಾರಂಟಿಗಳ ಯಶಸ್ಸಿನಿಂದ ಬೀಗುತ್ತಿರುವ ಕಾಂಗ್ರೆಸ್ ಬಲ ಪ್ರದರ್ಶನಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ.