(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಎಪ್ರಿಲ್ 24
ನಗರದ ರೈಲ್ವೆ ಸ್ಟೇಶನ್ ರಸ್ತೆ ಅಧ್ವಾನ ಸ್ಥಿತಿಗೆ ತಲುಪಿರುವ ನಡುವೆಯೇ ಈ ಮಾರ್ಗದಲ್ಲಿ ಬೀದಿ ದೀಪ ಅಳವಡಿಸದಿರುವುದರಿಂದ ನಸುಕಿನಲ್ಲಿ ಹಾಗೂ ರಾತ್ರಿ ಹೊತ್ತು ಪ್ರಯಾಣಿಕರು ಸಂಚರಿಸಲು ಸಮಸ್ಯೆ ಎದುರಿಸುತ್ತಿದ್ದಾರೆ. ಕತ್ತಲಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಿದ್ದು, ಪ್ರಯಾಣಿಕರು ಭಯದಿಂದ ಸ್ಟೇಶನ್‌ನತ್ತ ಧಾವಿಸುವಂತಾಗಿದೆ.
ಮಾರ್ಚ್ 15, 2024 ರಂದು ರೈಲ್ವೆ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಗಿತ್ತು. ಅಂದಿನಿಂದಲೇ ರೈಲು ಓಡಾಟ ನಡೆದಿದೆ. ಪ್ರತಿದಿನ ಸಿಂಧನೂರಿನಿಂದ 173304 ಸಂಖ್ಯೆಯ ರೈಲು ನಸುಕಿನ ವೇಳೆ 5 ಗಂಟೆಗೆ ಇಲ್ಲಿಂದ ಹುಬ್ಬಳ್ಳಿಗೆ ಹೊರಡುತ್ತದೆ. ಇದಕ್ಕೂ ಮುನ್ನ ಹದಗೆಟ್ಟ ರಸ್ತೆಯಲ್ಲಿ, ಬೀದಿ ನಾಯಿಗಳ ಕಾಟದ ನಡುವೆ ಪ್ರಯಾಣಿಕರು ರೈಲ್ವೇ ಸ್ಟೇಶನ್‌ಗೆ ತಲುಪಬೇಖಿದೆ. ಬರೋಬ್ಬರಿ 26 ವರ್ಷಗಳ ನಂತರ ನಗರಕ್ಕೆ ರೈಲ್ವೆ ಸಂಚಾರ ಸೌಕರ್ಯವೇನು ದೊರೆಯಿತು ಎನ್ನುವ ಖುಷಿಯ ನಡುವೆ, ಅಲ್ಲಿಗೆ ತಲುಪಲು ಸುಗಮ-ಸುರಕ್ಷತೆ ರಸ್ತೆ ಇಲ್ಲದಂತಾಗಿರುವುದು ಹಾಗೂ ಮೂಲ ಸೌಕರ್ಯಗಳ ಕೊರತೆಯ ಬಗ್ಗೆ ಪ್ರಯಾಣಿಕರು ದೂರುತ್ತಾರೆ. ಇನ್ನೂ ಗಂಗಾವತಿ ರಸ್ತೆ ಹಾಗೂ ಕೆಲ ಪ್ರಮುಖ ಒಳ ರಸ್ತೆಗಳಲ್ಲಿ ರೈಲ್ವೆ ಸ್ಟೇಶನ್‌ಗೆ ತೆರಳುವ ಮಾರ್ಗದ ಕುರಿತು ನಾಮಫಲಕಗಳನ್ನು ಹಾಕದೇ ಇರುವುದರಿಂದ ಪ್ರಯಾಣಿಕರು ಸುತ್ತಿಬಳಸಿಕೊಂಡು ಸ್ಟೇಶನ್ ತಲುಪುವಂತಾಗಿದೆ. ಹಾಗಾಗಿ ಸಂಬಂಧಿಸಿದ ಇಲಾಖೆಯವರು ಹಾಗೂ ಸ್ಥಳೀಯಾಡಳಿತ ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂಬುದು ಪ್ರಯಾಣಿಕರ ಒತ್ತಾಯವಾಗಿದೆ.