ಬಳಗಾನೂರು : ವಾರದಲ್ಲೇ ಎರಡು ಬರ್ಬರ ಕೊಲೆ, ಬೆಚ್ಚಿದ ಜನತೆ

Spread the love

(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಎಪ್ರಿಲ್ 24
ಮಸ್ಕಿ ತಾಲೂಕಿನ ಬಳಗಾನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾರದೊಳಗಡೆ ಎರಡು ಬರ್ಬರ ಕೊಲೆ ಹಾಗೂ ಒಂದು ಆತ್ಮಹತ್ಯೆ ಘಟನೆ ನಡೆದಿರುವುದು ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಯದ ವಾತಾವರಣಕ್ಕೆ ಕಾರಣವಾಗಿದೆ. ಲೋಕಸಭಾ ಚುನಾವಣೆ ಹೊತ್ತಲ್ಲೇ ಕೊಲೆ, ದೌರ್ಜನ್ಯ ಸೇರಿದಂತೆ ಅಪರಾಧಿಕ ಚಟುವಟಿಕೆಗಳು ಹೆಚ್ಚುತ್ತಿರುವುದು ಗ್ರಾಮೀಣ ಪ್ರದೇಶದ ಜನರಲ್ಲಿ ಆತಂಕ ಮನೆ ಮಾಡಿದೆ. ಪೊಲೀಸರು ಚುನಾವಣೆ ಕರ್ತವ್ಯದಲ್ಲಿ ಬ್ಯುಸಿಯಾಗಿರುವುದರಿಂದ ಕೆಲ ಗ್ರಾಮಗಳಲ್ಲಿ ಕುಡುಕರ ಹಾವಳಿ ಹೆಚ್ಚಿದೆ, ಅಪರಾಧಿಕ ಚಟುವಟಿಕೆಗಳನ್ನು ನಡೆಸುವವರಿಗೆ ಸುಗ್ಗಿಯೇ ಸಿಕ್ಕಂತಾಗಿದೆ. ಇನ್ನು ಕಾನೂನಿನ ಭಯ ಮರೆಯಾಗಿದ್ದು, ಕೊಲೆ, ದೌರ್ಜನ್ಯ ಹಾಗೂ ಕ್ಷುಲ್ಲಕ ವಿಷಯಗಳಿಗೆ ಜಗಳದ ಘಟನೆಗಳು ಹೆಚ್ಚುತ್ತಿವೆ ಎಂಬುದು ಬಳಗಾನೂರು ಪೊಲೀಸ್ ಠಾಣೆ ವ್ಯಾಪ್ತಿಯ ಹಲವು ಗ್ರಾಮಗಳ ಜನರ ಅಭಿಪ್ರಾಯವಾಗಿದೆ.
ಪತ್ನಿ ಕೊಲೆ ಮಾಡಿ, ಪತಿ ಆತ್ಮಹತ್ಯೆ
ಪತ್ನಿಯ ನಡವಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿ, ದಿದ್ದಿಗಿ ಗ್ರಾಮದ ಭೀಮಪ್ಪ ಎನ್ನುವಾತ, ಗ್ರಾಮದ ಹೊರವಲಯದಲ್ಲಿ ಪತ್ನಿ ಸವಿತಾಳನ್ನು ಕೊಲೆಮಾಡಿ ತಾನೂ ಜಮೀನಿನ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಎಪ್ರಿಲ್ 18 ರಂದು ವರದಿಯಾಗಿತ್ತು. ಈ ಕುರಿತು ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯ ಬರ್ಬರ ಕೊಲೆ
ತನ್ನ ಪತ್ನಿಯ ಜೊತೆ ಅನೈತಿಕ ಸಂಬಂದ ಹೊಂದಿದ್ದಾನೆಂಬ ಸಿಟ್ಟಿನಿಂದ ಮಾರುತಿ ಎನ್ನುವಾತ ಖಾದರ್ ಬಾಷಾ ಎಂಬಾತನನ್ನು ಮಾರಕಾಸ್ತçದಿಂದ ಕೊಚ್ಚಿ ಕೊಲೆಮಾಡಿದ ಘಟನೆ ಬಳಗಾನೂರು ಪಟ್ಟಣದ ಹೊರವಲಯದ ಹಳ್ಳದ ಹತ್ತಿರ ಮಂಗಳವಾರ ಬೆಳಿಗ್ಗೆ ನಡೆದಿದ್ದು, ಕೊಲೆ ಮಾಡಿದ ಆರೋಪಿ ಪೊಲೀಸ್ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಬಳಗಾನೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಪೊಲೀಸರು ಬ್ಯುಸಿ, ಕ್ರಿಮಿನಲ್‌ಗಳ ಆಟಾಟೋಪ ?
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭದ್ರತೆ ಸೇರಿದಂತೆ ಇಲಾಖೆಯ ಮೇಲಧಿಕಾರಿಗಳ ಹತ್ತು ಹಲವು ನಿರ್ದೇಶನಗಳ ಕಾರಣ ಪೊಲೀಸರು ಬ್ಯುಸಿಯಾಗಿರುವುದನ್ನೇ ಕಾಯುತ್ತ ಕುಳಿತಿದ್ದ ಕೆಲ ಅಪರಾಧಿಕ ಮನೋಭಾವ ಉಳ್ಳವವರು ಈ ಸಂದರ್ಭದಲ್ಲಿ ಬಾಲ ಬಿಚ್ಚುತ್ತಿದ್ದು, ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ. ಹಾಡಹಗಲೇ ಕೊಲೆ, ದೌರ್ಜನ್ಯ ಘಟನೆಗಳು ನಡೆದರೆ ಜನಸಾಮಾನ್ಯರು ಹಾಗೂ ಮುಗ್ದರನ್ನು ಕಾಪಾಡುವವರು ಯಾರು ? ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಮಿತಿ ಮೀರಿದ ಮದ್ಯವ್ಯಸನಿಗಳ ಹಾವಾಳಿ ?
“ಚುನಾವಣೆ ಇರೋದ್ರಿಂದ ಕುಡುಕರ ಹಾವ್ಳಿ ಸಾಕಾಗಿ ಹೋಗೈತ್ರಿ. ಯರ‍್ಯೋರೊ ಫ್ರೀ ಕುಡಸ್ತಾರಂತ ಕಂಟಮಠ ಕುಡುದು ಬಂದು ರಾತ್ರೀಯಿಡಿ ಜಗಳ ಆಡ್ತಾರ, ಇನ್ನು ಬಾಯಿಗೆ ಬಂದಂಗ ಕಬಾಸ್ತಾರ. ಚುನಾವಣೆ ಇರೋದ್ರಿಂದ ಪೊಲೀಸರು ಅಡ್ಡಾಡೋದು ಕಮ್ಮಿ ಆಗೈತಿ. ಇವ್ರಿಗೆ ಯಾರ ಅಂಜಿಕಿ ಇಲ್ಲ. ಹೊಲ, ಮನಿಗೆ ಅಡ್ಡಾಡಬಕಂದ್ರ ಅಂಜಿಕೆನಂಗ ಆಗೈತ್ರಿ ನೋಡ್ರಿ’’ ಎಂದು ಬಳಗಾನೂರು ಗ್ರಾಮದ ಸಾರ್ವಜನಿಕರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪೊಲೀಸ್ ಇಲಾಖೆಗೆ ಸವಾಲು ?
ಲೋಕಸಭಾ ಚುನಾವಣೆಯ ಹೊತ್ತಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕರ್ತವ್ಯದ ಒತ್ತಡ, ಸಿಬ್ಬಂದಿಗಳ ಕೊರತೆಯಿಂದಾಗಿ ಅಧಿಕಾರಿಗಳು ಅವಧಿಮೀರಿ, ಶಕ್ತಿಮೀರಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಗ್ರಾಮೀಣ ಪ್ರದೇಶದಲ್ಲಿ ನಾನಾ ಕಾರಣಕ್ಕೆ ಕ್ರೆöÊಂ ರೇಟ್ ಹೆಚ್ಚುತ್ತಿರುವುದು ಸಿಬ್ಬಂದಿಗಳಿಗೆ ತಲೆನೋವಾಗಿದ್ದರೆ, ಇತ್ತ ತಹಬಂದಿಗೆ ತರುವ ಸವಾಲು ಎದುರಾಗಿದೆ.
ಪೊಲೀಸ್ ಬೀಟ್ ಹೆಚ್ಚಿಸಲು ಆಗ್ರಹ ?
ಬಳಗಾನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ, ದೌರ್ಜನ್ಯ ಹಾಗೂ ಚುನಾವಣೆಯ ಹೊತ್ತಲ್ಲಿ ಜಗಳ ಇನ್ನಿತರೆ ಅಪರಾಧಿಕ ಚಟುವಟಿಕೆಗಳನ್ನು ಹತ್ತಿಕ್ಕಲು ಕೂಡಲೇ ಜಿಲ್ಲಾಡಳಿತ ಪೊಲೀಸ್ ಬೀಟ್ ಹೆಚ್ಚಿಸಬೇಕು ಹಾಗೂ ಎಲ್ಲಾ ಗ್ರಾಮಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ, ಜನರಲ್ಲಿ ಭಯದ ವಾತಾವರಣ ಹೋಗಲಾಡಿಸಲು ಕೂಡಲೇ ಜಾಗೃತಿ-ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಧ್ವನಿ ವರ್ಧಕದ ಮೂಲಕ ಪ್ರಚಾರ ಕೈಗೊಳ್ಳಬೇಕು ಎಂದು ಠಾಣಾ ವ್ಯಾಪ್ತಿಯ ಹಲವು ಗ್ರಾಮಗಳ ಜನರು ಒತ್ತಾಯಿಸಿದ್ದಾರೆ.

Namma Sindhanuru Click For Breaking & Local News
ಮಸ್ಕಿ ತಾಲೂಕಿನ ಬಳಗಾನೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಘಟನೆಗೆ ಸಂಬಂಧಿಸಿದಂತೆ ರಾಯಚೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌.ಬಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Spread the love

Leave a Reply

Your email address will not be published. Required fields are marked *