ಪ್ರಧಾನಿ ಮೋದಿ ಹೇಳಿಕೆಗೆ: ಸಿಪಿಐ(ಎಂಎಲ್) ಮಾಸ್‌ಲೈನ್ ಖಂಡನೆ

Spread the love

ನಮ್ಮ ಸಿಂಧನೂರು, ಎಪ್ರಿಲ್ 23
ಪ್ರಧಾನಿ ನರೇಂದ್ರ ಮೋದಿಯವರು ರಾಜಸ್ಥಾನದಲ್ಲಿ ಚುನಾವಣೆ ಪ್ರಚಾರದ ವೇಳೆ ಮಾಡಿರುವ ಭಾಷಣವನ್ನು ಸಿಪಿಐ(ಎಂಎಲ್) ಮಾಸ್‌ಲೈನ್ ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ್ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಜನವಿರೋಧಿ ನೀತಿಗಳನ್ನು ಜಾರಿಗೆ ತರುವ ಮೂಲಕ ಕಾರ್ಪೋರೇಟ್ ಉದ್ಯಮಿಗಳಿಗೆ ದೇಶದ ಸಂಪತ್ತನ್ನು ಲೂಟಿ ಹೊಡೆಯಲು ಮುಕ್ತ ಅವಕಾಶ ಮಾಡಿಕೊಟ್ಟಿರುವ ಮೋದಿಯವರು, ಸೋಲುವ ಭೀತಿಯಿಂದ ಅತ್ಯಂತ ಕೀಳುಮಟ್ಟದ ಭಾಷಣ ಮಾಡಿದ್ದಾರೆ. ಈಗಾಗಲೇ 102 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಈ ದೇಶದ ಜನರು ಬಿಜೆಪಿ ವಿರುದ್ಧವಾಗಿರುವ ಬಗ್ಗೆ ಆತಂಕಗೊಂಡಿರುವ ಪ್ರಧಾನಿಗಳು ದೇಶದ ಸೌಹಾರ್ದ ವಾತಾವರಣಕ್ಕೆ ಭಂಗ ತರಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಆಡಳಿತದಲ್ಲಿ ಜನವಿರೋಧಿ ನೀತಿಗಳ ಸರಮಾಲೆಯನ್ನೇ ಜಾರಿಗೆ ತರಲಾಗಿದೆ. ಮಿತಿಮೀರಿದ ಭ್ರಷ್ಟಾಚಾರ, ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ರೈತರ ಆತ್ಮಹತ್ಯೆಗಳು, ಎಂ.ಎಸ್.ಪಿ ಜಾರಿಗೆ ತರದೇ ಇರುವುದು, ಎಲೆಕ್ಟ್ರೋಲ್ ಬಾಂಡ್ ಭ್ರಷ್ಟಾಚಾರ, ಪೆಟ್ರೋಲ್, ಡೀಸೆಲ್, ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಬಿಜೆಪಿ ಆಡಳಿತ ವೈಫಲ್ಯದಿಂದ ಜನಸಾಮಾನ್ಯರು ಬೀದಿಗಿ ಬಿದ್ದಿದ್ದಾರೆ. ಇದನ್ನು ಮರೆಮಾಚಲು ಮೋದಿಯವರು ಕೀಳು ಮಟ್ಟದ ಭಾಷಣಕ್ಕೆ ಮುಂದಾಗಿದ್ದಾರೆ. ದೇಶದ ಜನರು ಮೋದಿಯವರ ಈ ರೀತಿಯ ಮಾತುಗಳಿಗೆ ಚುನಾವಣೆಯ ಮೂಲಕವೇ ಸರಿಯಾದ ಉತ್ತರ ಕೊಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಿಜೆಪಿಯ ಕಾರ್ಪೋರೇಟ್ ಪರ ನೀತಿಗಳಿಂದಾಗಿ ಉತ್ತರ ಭಾರತದಲ್ಲಿ ಸಮಸ್ಯೆಗಳು ಹೆಚ್ಚಿದ್ದು, ಇಲ್ಲಿನ ಜನರು ಬದುಕಿನಮಟ್ಟ ಕುಸಿದಿದೆ. ಹೀಗಾಗಿ ವ್ಯಾಪಕವಾಗಿ ಬಿಜೆಪಿಗೆ ವಿರೋಧ ವ್ಯಕ್ತವಾಗುತ್ತಿದ್ದು, ಇಂಡಿಯಾ ಒಕ್ಕೂಟದ ಪರ ಅಲೆ ಬೀಸುತ್ತಿದೆ. ಇನ್ನು ದಕ್ಷಿಣದ ರಾಜ್ಯಗಳಲ್ಲಿಯೂ ಪ್ರಾದೇಶಿಕ ಪಕ್ಷಗಳು ಹಾಗೂ ಇಂಡಿಯಾ ಒಕ್ಕೂಟಕ್ಕೆ ದಿನದಿಂದ ದಿನಕ್ಕೆ ಜನರ ಬೆಂಬಲ ಹೆಚ್ಚುತ್ತಿದೆ. ಬಿಜೆಪಿ ಮತ್ತು ಮೋದಿಯವರು ಏನೆಲ್ಲಾ ತಂತ್ರ, ಕುತಂತ್ರಗಳನ್ನು ಮಾಡಿದರೂ ಈ ದೇಶದ ಜನರು ಈ ಭಾರಿ ಬಿಜೆಪಿಯನ್ನು ಸೋಲಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.


Spread the love

Leave a Reply

Your email address will not be published. Required fields are marked *