ಸಿಂಧನೂರು: ಜನಪರ ಪರ್ಯಾಯ ಎಡ ಮತ್ತು ಜನತಾಂತ್ರಿಕ ರಾಜಕೀಯ ಶಕ್ತಿ ಸೃಷ್ಟಿಸಲು ಎಸ್‌ಯುಸಿಐ (ಕಮ್ಯುನಿಸ್ಟ್) ಬೆಂಬಲಿಸಲು ಮನವಿ

Spread the love

ನಮ್ಮ ಸಿಂಧನೂರು, ಏಪ್ರಿಲ್ 18
ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದಿಂದ ಸ್ಪರ್ಧಿಸಿರುವ ಶರಣಪ್ಪ ಅವರನ್ನು ಪ್ರಸಕ್ತ ಚುನಾವಣೆಯಲ್ಲಿ ಬೆಂಬಲಿಸುವಂತೆ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಮುಖಂಡರಾದ ವೀರೇಶ್.ಎನ್.ಎಸ್, ಶರಣಪ್ಪ ಉದ್ಬಾಳ್ ಮತದಾರರಲ್ಲಿ ಮನವಿ ಮಾಡಿದರು. ನಗರದ ಪತ್ರಿಕಾ ಭವನದಲ್ಲಿ ಗುರುವಾರ ಜಂಟಿ ಸುದ್ದಿಗೋಷ್ಠಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 2024ರ ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಅಧಿಕಾರದಲ್ಲಿರುವಾಗ ಜನರ ಕೆಂಗಣ್ಣಿಗೆ ಗುರಿಯಾಗುವ ಬಂಡವಾಳಶಾಹಿ ಪಕ್ಷಗಳು ಹೊಸ ಮುಖಗಳೊಂದಿಗೆ, ಹೊಸ ಗ್ಯಾರಂಟಿಗಳೊಂದಿಗೆ ಮತ್ತೆ ಜನರ ಬಳಿಗೆ ಬರುತ್ತಿವೆ. ಇನ್ನೊಂದೆಡೆ, ದುಡಿಯುವ ಜನರ, ರೈತ, ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ದಿನನಿತ್ಯ ಹೋರಾಟ ಕಟ್ಟುತ್ತಿರುವ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷ ಕೂಡ ಈ ಚುನಾವಣೆಯಲ್ಲಿ, ದೇಶದ 19ರಾಜ್ಯ, 3 ಕೇಂದ್ರಾಡಳಿತ ಪ್ರದೇಶದ 151 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದ್ದು, ರಾಜ್ಯದ 19 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧೆ ನಡೆಸುತ್ತಿದೆ ಎಂದು ಹೇಳಿದರು.

Namma Sindhanuru Click For Breaking & Local News

ಎನ್.ಡಿ.ಎ ಸರ್ಕಾರ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ
ಕಳೆದ 10 ವರ್ಷಗಳಿಂದ ದೇಶವನ್ನು ಆಳುತ್ತಿರುವ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ. 2014 ರಲ್ಲಿ ಬಿಜೆಪಿ ದನಿ ಎತ್ತಿದ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರದಂತಹ ಸಮಸ್ಯೆಗಳ ಕುರಿತು ಈಗ ಮೌನವಾಗಿದೆ. ಅಬ್ಬರದ ಪ್ರಚಾರ ಮಾಡಿದ ‘ಗುಜರಾತ್ ಮಾದರಿ’ ಅದೃಶ್ಯವಾಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗದ ಮಾತಿರಲಿ, ಭಾರತದ ಯುವಕರು ನಿರುದ್ಯೋಗದ ಕಷ್ಟ ತಡೆಯಲಾಗದೆ, ಯುದ್ಧಪೀಡಿತ ಇಸ್ರೇಲ್, ರಷ್ಯಾಗಳಿಗೆ ಕೆಲಸ ಹುಡುಕಿಕೊಂಡು ಹೋಗುತ್ತಿದ್ದಾರೆ. ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ 10 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿಯಿದ್ದರೂ, ಅವುಗಳನ್ನು ತುಂಬಿಸಲು ಕ್ರಮಗಳಿಲ್ಲ ಎಂದು ಕೇಂದ್ರ ಸರ್ಕಾರದ ಆಡಳಿತ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
30 ರೈತರು ಆತ್ಮ ಹತ್ಯೆ !
ಅಗತ್ಯ ವಸ್ತುಗಳ ಬೆಲೆ ಏರಿಕೆ, ದುಬಾರಿ ಶಿಕ್ಷಣ-ಆರೋಗ್ಯ ಸೌಲಭ್ಯಗಳು ಜೀವನ ವೆಚ್ಚವನ್ನು ಹೆಚ್ಚಿಸಿ, ಜನರನ್ನು ಸಾಲಗಾರರನ್ನಾಗಿ ಮಾಡಿವೆ. 9.9 ಕೋಟಿ ಸಂಖ್ಯೆಯಿದ್ದ ಮಧ್ಯಮ ವರ್ಗದ ಕುಟುಂಬಗಳು 6.6 ಕೋಟಿಗೆ ಕುಸಿದಿವೆ. ಮತ್ತೊಂದೆಡೆ ಬಿಜೆಪಿ ಆಡಳಿತದಲ್ಲಿ ದಿನಕ್ಕೆ 30 ರೈತರು ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದು, ಇಲ್ಲಿಯವರೆಗೆ ರೈತರ ಆತ್ಮ ಹತ್ಯೆಯ ಸಂಖ್ಯೆ 4 ಲಕ್ಷವನ್ನು ದಾಟಿದೆ. ಇನ್ನೊಂದೆಡೆ ಆಕ್ಸ್ಫಾಮ್ ವರದಿಯಂತೆ ಜನ ಸಂಖ್ಯೆಯ ಶೇ.5ಕ್ಕಿಂತಲೂ ಕಡಿಮೆಯಿರುವ ಅತಿ ಶ್ರೀಮಂತರು ದೇಶದ ಶೇ.60ರಷ್ಟು ಆಸ್ತಿಯ ಒಡೆಯರಾಗಿದ್ದಾರೆ. 2020 ರಲ್ಲಿ 102ರಷ್ಟು ಇದ್ದ ಬಿಲಿಯನೇರ್‌ಗಳ (ಶತ ಕೊಟ್ಯಾಧಿಪತಿ) ಸಂಖ್ಯೆ 2022 ರಲ್ಲಿ 166 ಕ್ಕೆ ಏರಿದೆ. ನಮ್ಮ ದೇಶದ 100 ಅತಿ ಶ್ರೀಮಂತರ ಆಸ್ತಿ 54.12 ಲಕ್ಷ ಕೋಟಿಯಷ್ಟಿದ್ದು, ಈ ಮೊತ್ತ 18 ತಿಂಗಳ ಕೇಂದ್ರ ಬಜೆಟ್‌ಗೆ ಸಮನಾಗಿದೆ. ಹಾಗಿದ್ದಲ್ಲಿ ‘ಮೇರಾ ಭಾರತ್ ಮೇರಾ ಪರಿವಾರ’ ಎನ್ನುವ ಮೋದಿ ಸರ್ಕಾರದ ಆಳ್ವಿಕೆಯಲ್ಲಿ ಉದ್ಧಾರವಾದವರು ಯಾರು? ಸಾಮಾನ್ಯ ಜನರೇ? ಅಥವಾ ಅಂಬಾನಿ-ಅದಾನಿಗಳೇ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಕೊಪ್ಪಳ ಕ್ಷೇತ್ರದ ಅಭ್ಯರ್ಥಿ ಶರಣಪ್ಪ, ರಾಯಚೂರು ಜಿಲ್ಲಾ ಸಮಿತಿ ಸದಸ್ಯರಾದ ತಿರುಮಲ್ ರಾವ್ ಹಸಮಕಲ್, ತಿರುಪತಿ ಗೋನ್ವಾರ್, ಶರಣು ಪಾಟೀಲ್, ಭೀಮರಾಯ ವಕೀಲ ಸೇರಿದಂತೆ ಇನ್ನಿತರರು ಇದ್ದರು.


Spread the love

Leave a Reply

Your email address will not be published. Required fields are marked *