(ಪೊಲಿಟಿಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಏಪ್ರಿಲ್ 14
ಕೊಪ್ಪಳ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರ ಪ್ರಚಾರಾರ್ಥ ಯಲಬುರ್ಗಾ ತಾಲೂಕಿನ ವಜ್ರಬಂಡಿ ಗ್ರಾಮದಲ್ಲಿ ಶನಿವಾರ ಅವರ ಸೋದರ ಹಾಗೂ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಬಿರುಸಿನ ಮಳೆಯಲ್ಲೂ ಛತ್ರಿ ಹಿಡಿದು ಮತಯಾಚನೆ ಮಾಡಿರುವುದು ಸಖತ್ ಸುದ್ದಿಯಾಗಿದೆ.
ಮಧ್ಯಾಹ್ನದ ಸಂದರ್ಭದಲ್ಲಿ ಗ್ರಾಮದಲ್ಲಿ ಕಾಂಗ್ರೆಸ್ನಿAದ ಪ್ರಚಾರ ಸಭೆ ಹಮ್ಮಿಕೊಳ್ಳಲಾಗಿತ್ತು, ಮೋಡ ಮುಸುಕಿದ ವಾತಾವರಣದಲ್ಲಿ ಏಕಾಏಕಿ ಮಳೆ ಸುರಿಯುತ್ತಿದ್ದಂತೆ ಹಾಕಿದ್ದ ಶಾಮಿಯಾನ ತೊಯ್ದು ನೀರು ಸೋರಿತು. ಇದನ್ನು ಗಮನಿಸಿದ ಕಾರ್ಯಕರ್ತರು ರಾಘವೇಂದ್ರ ಅವರ ಪ್ರಚಾರ ಭಾಷಣಕ್ಕೆ ಛತ್ರಿ ಹಿಡಿದು ಸಹಕರಿಸಿದರು. ಸುರಿಯುತ್ತಿರುವ ಮಳೆಯಲ್ಲೂ ಕೆಲವರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು.
ಎರಡನೇ ಬಾರಿಗೆ ಕೊಪ್ಪಳ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಸೋದರ ರಾಜಶೇಖರ್ ಹಿಟ್ನಾಳ್ ಅವರ ಪರ ಶಾಸಕ ರಾಘವೇಂದ್ರ ಹಿಟ್ನಾಳ್ ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳೊಂದಿಗೆ ಸರಣಿಯೋಪಾದಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಇನ್ನೇನು ಚುನಾವಣಾ ಮತದಾನಕ್ಕೆ ೨೩ ದಿನಗಳು ಬಾಕಿ ಉಳಿದಿದ್ದು, ಕೊಪ್ಪಳ ಜಿಲ್ಲೆಯ ೮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದಾರೆ.