ನಮ್ಮ ಸಿಂಧನೂರು, ಏಪ್ರಿಲ್ 13
ಜನವಿರೋಧಿ ಬಿಜೆಪಿ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯವನ್ನು ಖಂಡಿಸಿ, ಕಾರ್ಪೊರೇಟ್ ಮನುವಾದಿ ನೀತಿಯ ವಿರುದ್ಧ, ಸಂವಿಧಾನದ ಮೇಲೆ ನಡೆಯುತ್ತಿರುವ ದಾಳಿಯನ್ನು ವಿರೋಧಿಸಿ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯಿಂದ “ ಸಂವಿಧಾನ ಮತ್ತು ಪ್ರಜಾತಂತ್ರದ ಉಳಿವಿಗಾಗಿ ಬಿಜೆಪಿ ಸೋಲಿಸಿ’’ ಚುನಾವಣಾ ಜನಜಾಗೃತಿ ಅಭಿಯಾನವನ್ನು ಏ.17ರಿಂದ ಸಿಂಧನೂರು ತಾಲೂಕಿನಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕರಾದ ಡಿ.ಎಚ್.ಪೂಜಾರ್ ತಿಳಿಸಿದರು.
ಅವರು ಶನಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮತ್ತೊಮ್ಮೆ ಲೋಕಸಭಾ ಚುನಾವಣೆ ಮುಂದೆ ಬಂದಿದೆ. ಜಾತಿ, ಮತ-ಧರ್ಮ ಹಾಗೂ ಹಣ, ಆಮಿಷದ ಅಮಲನ್ನೇರಿಸಿ ಬಡವರ ಬದುಕನ್ನು ಕಿತ್ತಿ ತಿನ್ನುವ ಸಂಕಟವನ್ನು ಜನರ ಮೇಲೆ ದೂಡಿ ಭಾರೀ ಬಂಡವಾಳಿಗರ ಹಿತಕಾಯುತ್ತಿರುವ ಬಿಜೆಪಿ ಈ ಬಾರಿ 400 ಸೀಟು ಗೆದ್ದು, ಸಂಪೂರ್ಣ ‘ಕಾರ್ಪೊರೇಟ್ ಹಿಂದುತ್ವ’ ದೇಶ ಕಟ್ಟುವ ಮೋದಿ ಗ್ಯಾರಂಟಿಯೊAದಿಗೆ ಅಬ್ಬರದ ಪ್ರಚಾರ ಆರಂಭಿಸಿದೆ. ಇಲ್ಲಿಗೆ ಹತ್ತು ವರ್ಷಗಳ ಹಿಂದೆ ಭರವಸೆಗಳ ಗೋಪುರಗಳನ್ನೇ ತೋರಿಸಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸದೇ ವಂಚಿಸಿದೇ ಎಂದು ಕಿಡಿಕಾರಿದರು.
ಮೋದಿಯವರು ‘ನಾ ಖಾವೂಂಗಾ ನ ಖಾನೇ ದೋಂಗಾ’ ಎಂದು ಹೇಳಿದ್ದರು, ಚುನಾವಣಾ ಬಾಂಡ್ ಹೆಸರಿನಲ್ಲಿ ಇಡಿ, ಐಟಿ, ಸಿಬಿಐಗಳನ್ನು ಬಳಸಿಕೊಂಡು ಬಿಜೆಪಿ ಕೋಟ್ಯಂತ ರೂಪಾಯಿ ವಸೂಲಿ ಮಾಡಿದೆ. 33 ಕಂಪನಿಗಳಿಂದ 1751 ಕೋಟಿ ರೂಪಾಯಿ ಬಾಂಡ್ ಲಂಚ ಪಡೆದು 3.07 ಲಕ್ಷ ಕೋಟಿ ಕಾಮಗಾರಿ ಗುತ್ತಿಗೆ ನೀಡಿದೆ. ಸಿಬಿಐ, ಐಟಿ, ಇಡಿಗಳಿಂದ ದಾಳಿಗೊಳಗಾದ 41 ಕಂಪನಿಗಳಿAದ 2071 ಕೋಟಿ ಬಾಂಡ್ ಮೂಲಕ ದೇಣಿಗೆ ಪಡೆದಿದೆ. ಹೀಗೆ ಹೆದರಿಸಿ, ಬೆದರಿಸಿ ಸುಲಿಗೆ ಮಾಡುತ್ತಿರುವುದು ಇದು ಯಾವ ಮಾದರಿಯ ಭ್ರಷ್ಟಾಚಾರ ಎಂದು ಪ್ರಶ್ನಿಸಿದರು.
ಮೋದಿಯವರ ಅಧಿಕಾರದಲ್ಲಿ ದೇಶದಲ್ಲಿ ಬಿಲಿಯೇನರ್ (ಕೋಟ್ಯಾಧೀಶರು) ಸಂಖ್ಯೆ 56ರಿಂದ 149ಕ್ಕೆ ಏರಿದೆ. ದೇಶದಲ್ಲಿ ಶೇ.1ರಷ್ಟು ಶ್ರೀಮಂತರು ಒಟ್ಟು ಸಂಪತ್ತಿನ ಶೇ.40ರಷ್ಟನ್ನು ಹೊಂದಿದ್ದಾರೆ. ಆದರೆ ದೇಶದ ಅರ್ಧದಷ್ಟು ಜನರು ಶೇ.೩ರಷ್ಟು ಸಂಪತ್ತನ್ನು ಹೊಂದಿದ್ದಾರೆ. ಅದಾನಿ ಆಸ್ತಿ 2013ರಲ್ಲಿ 25,795 ಕೋಟಿ ಇದ್ದದ್ದು, 2022ರ ಹೊತ್ತಿಗೆ 7,48,800 ಕೋಟಿ ಆಯ್ತು ಅಂದರೆ ಮೂವತ್ತು ಪಟ್ಟು ಹೆಚ್ಚಾಗಿದೆ. ಆದಾನಿ ಆಸ್ತಿ 2014ರಲ್ಲಿ 1,54,742 ಕೋಟಿ ಇದ್ದದ್ದು, 2022ರಲ್ಲಿ 7,54,220 ಕೋಟಿ ಆಗಿದೆ. ಅಂದರೆ ಐದು ಪಟ್ಟು ಹೆಚ್ಚಾಗಿದೆ. ಬಿಜೆಪಿ ದೇಶದ ಬಡವರನ್ನು ಬೀದಿಗೆ ತಳ್ಳಿ ಉದ್ಯಮ ಪತಿಗಳ ಆಸ್ತಿಯನ್ನು ಬೆಳೆಸುತ್ತಿದೆ ಎಂದು ಹೇಳಿದರು.
ಏಪ್ರಿಲ್ 22ರಂದು ಬೈಕ್ ರ‍್ಯಾಲಿ
ಜನಜಾಗೃತಿಗೆ ಚಾಲನೆ ನೀಡುವ ಭಾಗವಾಗಿ ಏಪ್ರಿಲ್ 22ರಂದು ಪಿಡಬ್ಲುಡಿ ಕ್ಯಾಂಪ್‌ನ ಅಂಬೇಡ್ಕರ್ ಸರ್ಕಲ್‌ನಿಂದ ಪ್ರಮುಖ ಬೀದಿಗಳಲ್ಲಿ ಬೈಕ್ ರ‍್ಯಾಲಿ ನಡೆಯಲಿದೆ ತದನಂತರ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ನಡೆಯುವ ಸಂವಿಧಾನ ಜನಜಾಗೃತಿಗೆ ಸಭೆಯಲ್ಲಿ ಪ್ರಜಾತಂತ್ರವಾದಿಗಳು, ಪ್ರಜ್ಞಾವಂತರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಹಂಚಿನಾಳ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಕ್ಯಾತ್ನಟ್ಟಿ, ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬಸವಂತರಾಯ ಗೌಡ ಕಲ್ಲೂರ, ಸಿಪಿಐ ಮುಖಂಡರಾದ ವೆಂಕನಗೌಡ ಗದ್ರಟಗಿ, ಎಐಸಿಸಿಟಿಯುನ ಬಸವರಾಜ ಕೊಂಡೆ, ಜಮಾಅತೆ ಇಸ್ಲಾಮಿ ಹಿಂದ್‌ನ ಅಧ್ಯಕ್ಷ ಹುಸೇನ್ ಸಾಬ್, ಟಿಯುಸಿಐ ಜಿಲ್ಲಾಧ್ಯಕ್ಷ ಬಿ.ಎನ್.ಯರದಿಹಾಳ, ಉಪನ್ಯಾಸಕರಾದ ಚಂದ್ರಶೇಖರ ಗೊರಬಾಳ, ಶಂಕರ ಗುರಿಕಾರ, ಬಸವರಾಜ ಬಾದರ್ಲಿ, ಅಬ್ದುಲ್ ಸಮದ್ ಚೌದ್ರಿ ಉಪಸ್ಥಿತರಿದ್ದರು.