(ವರದಿ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಏಪ್ರಿಲ್ 13
ನಗರದಲ್ಲಿ ಮಧ್ಯಾಹ್ನ 2 ಗಂಟೆ 45 ನಿಮಿಷದ ಸುಮಾರು ಸಾಧಾರಣ ಮಳೆ ಸುರಿಯಿತು. ಮಧ್ಯಾಹ್ನ 1 ಗಂಟೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಜೋರು ಗಾಳಿಯಿಲ್ಲದೇ ಗುಡುಗಿನ ಸದ್ದು ಇಲ್ಲದೇ ಮಳೆ ಸುರಿಯಿತು. ಬಿಸಿಲ ಬೇಗೆಯ ನಡುವೆ ಸುರಿದ ಸಾಧಾರಣ ಮಳೆ ಒಂದಿಷ್ಟು ತಂಪೆರೆಯಿತು. ದಿನವೂ ನಿಗಿ ನಿಗಿ ನೆತ್ತಿ ಸುಡುತ್ತಿದ್ದ ಬಿಸಿಲು ಮಧ್ಯಾಹ್ನದ ನಂತರ ಒಂದಿಷ್ಟು ಕಡಿಮೆಯಾಗಿತ್ತು. 3 ಗಂಟೆಯ ಸುಮಾರು ಬಹಳಷ್ಟು ಮೋಡಗಳು ಕವಿದ ಪರಿಣಾಮ ಕೆಲವೊತ್ತು ಸೂರ್ಯ ಕಾಣಲಿಲ್ಲ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ಬೇಗೆಯಿಂದಾಗಿ ರಾತ್ರಿಯಲ್ಲಿ ಜನರು ನಿದ್ರೆಗೆ ಭಂಗ ಎದುರಿಸುತ್ತಿದ್ದು, ಯಾವಾಗ ಮಳೆ ಸುರಿಯುತ್ತೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಧ್ಯಾಹ್ನ ಮಳೆ ಸುರುವಾಗುತ್ತಿದ್ದಂತೆ ಆದರ್ಶ ಕಾಲೋನಿಯ ಮನೆಯೊಂದ ಮಹಡಿಯ ಮೇಲೆ ಚಿಕ್ಕಮಕ್ಕಳು ಕೇಕೆ ಹಾಕುತ್ತ ಕುಣಿದಿದ್ದು ಕಂಡುಬಂತು. ಅಂತು ಇಂತೂ ಮಳೆರಾಯನಿಗಾಗಿ ಜನ-ಜಾನುವಾರು ಕಾದು ಕುಳಿತಿದ್ದಾರೆ.