ಕೊಪ್ಪಳ ಎಂಪಿ ಕ್ಷೇತ್ರ : ಸಂಚಲನ ಸೃಷ್ಟಿಸಿದ ಗಂಗಾವತಿ ಎಮ್ಮೆಲ್ಲೆ ಜನಾರ್ದನ ರೆಡ್ಡಿ ಹೇಳಿಕೆ

Spread the love

(ಪೊಲಿಟಿಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಏಪ್ರಿಲ್ 10

ಮಸ್ಕಿ ವಿಧಾನಸಭಾ ಕ್ಷೇತ್ರದ ಸಂತೆಕೆಲ್ಲೂರಿನಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಗಂಗಾವತಿ ಕ್ಷೇತ್ರದ ಎಮ್ಮೆಲ್ಲೆ ಜನಾರ್ದನ ರೆಡ್ಡಿ ಅವರು, ರಾಯಚೂರು-ಕೊಪ್ಪಳ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು, ಕಾಂಗ್ರೆಸ್‌ನ ಕೆಲ ಶಾಸಕರು ಪರೋಕ್ಷ ಸಹಕಾರ ನೀಡುತ್ತಿದ್ದಾರೆಂದು ಮಾರ್ಮಿಕವಾಗಿ ಮಾತನಾಡಿರುವುದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಮೂರು ಅವಧಿಯಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಜಯಶಾಲಿಯಾಗಿದ್ದಾರೆ. ಗಂಗಾವತಿಯ ಶಿವರಾಮನಗೌಡರ ನಂತರ ಎರಡು ಅವಧಿಗೆ ಕೊಪ್ಪಳದ ಸಂಗಣ್ಣ ಕರಡಿ ಅವರು ಸ್ಪರ್ಧಿಸಿ ವಿಜಯಶಾಲಿಯಾಗುವ ಮೂಲಕ ಲೋಕಸಭೆ ಮೆಟ್ಟಿಲು ಹತ್ತಿದ್ದು, ಈಗಾಗಲೇ ಬಿಜೆಪಿ ಸತತ ಮೂರು ಬಾರಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧಿಸಿದೆ. ಈ ನಡುವೆ ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಅವರ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದ ರಾಜಶೇಖರ ಹಿಟ್ನಾಳ್ ಅವರು ಪುನಃ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ರಾಜಕೀಯ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದೆ.
ಒಗ್ಗಟ್ಟು ಪ್ರದರ್ಶನ
ಬಿಜೆಪಿಯಲ್ಲಿ ಆರಂಭದಲ್ಲಿ ಟಿಕೆಟ್ ಗೊಂದಲ ಉಂಟಾಗಿ, ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ನಿರಾಕರಣೆ ಅವರ ಬೆಂಬಲಿಗರು ಹಾಗೂ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್‌ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಸೇರಿದಂತೆ ಪಕ್ಷದ ಇನ್ನಿತರೆ ಹಲವು ಮುಖಂಡರ ಮನವೊಲಿಕೆಯ ನಂತರ ಪರಿಸ್ಥಿತಿ ತಿಳಿಗೊಂಡಿದ್ದು, ಬಿಜೆಪಿ ಈಗ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದೆ.
ಚರ್ಚೆಗೆ ಗ್ರಾಸ:
ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಪರ ಬೆಂಬಲ ಸೂಚಿಸಿದ್ದ ಕೆಆರ್‌ಪಿಪಿ ಸಂಸ್ಥಾಪಕ ಅಧ್ಯಕ್ಷ ಹಾಗೂ ಗಂಗಾವತಿ ಎಮ್ಮೆಲ್ಲೆ ಜನಾರ್ದನ ರೆಡ್ಡಿ, ದಿಢೀರ್ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವುದಂತೂ ನಿಜ. ಈ ನಡುವೆ ಬಿಜೆಪಿ ಸಭೆಯೊಂದರಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಸಚಿವ ಎನ್.ಎಸ್.ಭೋಸರಾಜ ಹಾಗೂ ಸಿಂಧನೂರು ಎಮ್ಮೆಲ್ಲೆ ಹಂಪನಗೌಡ ಬಾದರ್ಲಿ ಅವರ ಹೆಸರನ್ನು ಪ್ರಸ್ತಾಪಿಸಿ ಮಾತನಾಡಿರುವುದು ರಾಜಕೀಯ ವಲಯದಲ್ಲಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಪಾರ್ವರ್ಡ್, ಬ್ಯಾಕ್‌ವರ್ಡ್ ಮುನ್ನೆಲೆಗೆ
ಪ್ರಸಕ್ತ ಲೋಕ ಕಣದ ಚುನಾವಣೆ ಸಂದರ್ಭದಲ್ಲಿ ಪಾರ್ವರ್ಡ್, ಬ್ಯಾಕವರ್ಡ್ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಕಳೆದ ಮೂರು ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ಅಭ್ಯರ್ಥಿಗಳೇ ಅದು ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಪಡೆದುಕೊಂಡಿದ್ದಿದೆ. ಈ ನಡುವೆ ಈ ಬಾರಿ ಕಾಂಗ್ರೆಸ್‌ನಿAದ ಕುರುಬ ಸಮುದಾಯದ ಅಭ್ಯರ್ಥಿ ಹಾಗೂ ಬಿಜೆಪಿಯಿಂದ ಲಿಂಗಾಯತ ಸಮುದಾಯದ ಅಭ್ಯರ್ಥಿ ಲೋಕ ಕಣದಲ್ಲಿದ್ದು, ದಿನದಿಂದ ದಿನಕ್ಕೆ ಹೊಸ ಹೊಸ ಬೆಳವಣಿಗೆಗಳಾಗುತ್ತಿವೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಬಲವನ್ನು ಹೊಂದಿದ್ದರೂ ಜಾತಿ ಮೇಲಾಟ ಯಾವ ಕಡೆ ತಿರುಗುತ್ತದೆಯೋ ಹೇಳಲು ಬರುವುದಿಲ್ಲ ಎನ್ನುವುದು ಪ್ರಜ್ಞಾವಂತರ ವಿಶ್ಲೇಷಣೆಯಾಗಿದೆ.


Spread the love

Leave a Reply

Your email address will not be published. Required fields are marked *