(ವರದಿ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಏಪ್ರಿಲ್ 7
ಸಿಂಧನೂರು ನಗರದ ಹಳ್ಳ ಈ ಬಾರಿ ಬಹುಬೇಗನೆ ಬತ್ತಿದ್ದು, ಕೆಲ ವಾರ್ಡ್ನ ನಿವಾಸಿಗಳಿಗೆ ಬಳಕೆ ನೀರಿನ ಅಭಾವ ಉಂಟಾಗಿದೆ. ಹಳ್ಳದಲ್ಲಿ ನೀರಿದ್ದರೆ ಕೋಟೆ ಏರಿಯಾ, ಪಟೇಲ್‌ವಾಡಿ, ಬಡಿಬೇಸ್, ಯಲ್ಲಮ್ಮ ದೇವಸ್ಥಾನದ ಏರಿಯಾ ಸೇರಿದಂತೆ ಮರ‍್ನಾಲ್ಕು ವಾರ್ಡ್ನ ಜನರಿಗೆ ಬಟ್ಟೆ ತೊಳೆಯಲು, ಇನ್ನಿತರೆ ಬಳಕೆ ನೀರಿಗೆ ಬಹಳಷ್ಟು ಆಸರೆಯಾಗಿತ್ತು. ಆದರೆ ಈ ಬಾರಿ ಮಳೆಗಾಲದ ಕೊರತೆಯಿಂದಾಗಿ ಬೇಗನೆ ನೀರು ಖಾಲಿಯಾಗಿದೆ.
ನಗರಸಭೆಗೆ ಸವಾಲು
ಕೃಷಿಗೆ ಹಳ್ಳದ ನೀರನ್ನು ಅವಲಂಬಿಸಿದ್ದ ರೈತರ ಜಮೀನುಗಳನ್ನು ಈ ಬಾರಿ ಖಾಲಿ ಬಿಡಲಾಗಿದೆ. ಕಳೆದ ಬಾರಿ ಉತ್ತಮ ಮಳೆ ಜೊತೆಗೆ ತುಂಗಭದ್ರಾ ಎಡದಂಡೆ ನಾಲೆಯ ಉಪ ಕಾಲುವೆಗಳಿಗೆ ಎರಡು ಬೆಳೆಗೆ ನೀರು ಹರಿಸಿದ್ದರಿಂದ, ಹಳ್ಳ ವರ್ಷವಿಡೀ ಹರಿದಿತ್ತು. ಈ ಬಾರಿ ಬೇಗನೆ ಬರಿದಾಗಿದ್ದು, ಹಾಗಾಗಿ ಕೆಲ ವಾರ್ಡ್ಗಳಲ್ಲಿ ಬಳಕೆ ನೀರಿನ ಪ್ರಮಾಣ ಹೆಚ್ಚಿದೆ. ಅನಿವಾರ್ಯವಾಗಿ ಕೆರೆಯಿಂದಲೇ ನೀರು ಪೂರೈಸುವ ಸವಾಲು ನಗರಸಭೆಗೆ ಎದುರಾಗಿದೆ.