ಮಾಜಿ ಸಿಎಂ ಯಡಿಯೂರಪ್ಪರ ಉಪಸ್ಥಿತಿಯಲ್ಲಿ ಮನವೊಲಿಕೆ, ಸಂಗಣ್ಣ ಕರಡಿಯವರನ್ನು ಪ್ರಚಾರಕ್ಕೆ ಕರೆತರಲು ತೆರೆಮರೆಯ ಕಸರತ್ತು ?

Spread the love

(ಪೊಲಿಟಿಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮಾರ್ಚ್ 31
ಟಿಕೆಟ್ ನಿರಾಕರಣೆಯಿಂದ ಮುನಿಸಿಕೊಂಡಿರುವ ಹಾಲಿ ಸಂಸದ ಸಂಗಣ್ಣ ಕರಡಿ ಅವರನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ಸೇರಿದಂತೆ ಹೈಕಮಾಂಡ್‌ನ ಹಲವು ನಾಯಕರು ಮುಂಬರುವ ದಿನಗಳಲ್ಲಿ ಉನ್ನತ ಸ್ಥಾನಮಾನದ ಭರವಸೆ ನೀಡಿ ಮನವೊಲಿಕೆ ಮಾಡಿದ್ದು, ಅಭ್ಯರ್ಥಿಯೊಂದಿಗೆ ಅವರನ್ನು ಪ್ರಚಾರಕ್ಕೆ ಕರೆತರಲು ತೆರೆಮರೆಯಲ್ಲಿ ಇನ್ನಿಲ್ಲದ ಕಸರತ್ತು ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಎರಡು ಬಾರಿ ಲೋಕಸಭಾ ಸದಸ್ಯರಾಗಿ ಅನುಭವ ಹೊಂದಿರುವ ಹಾಲಿ ಸಂಸದ ಸಂಗಣ್ಣ ಕರಡಿ ಅವರನ್ನು ಹೊರತುಪಡಿಸಿ ಕ್ಷೇತ್ರದಲ್ಲಿ ನೆಲೆಯೂರುವುದು ಕಷ್ಟ ಎಂದು ಪರೋಕ್ಷವಾಗಿ ತಿಳಿದ ಹೈಕಮಾಂಡ್, ಮೇಲಿಂದ ಮೇಲೆ ಒತ್ತಡ ತರುವ ಮೂಲಕ ಬೇರೆ ಪಕ್ಷ ಅಥವಾ ಪಕ್ಷೇತರರಾಗಿ ನಿಲ್ಲದಂತೆ ಸೆಂಟಿಮೆಂಟಲ್ ದಿಗ್ಬಂಧನ ಹಾಕಿ, ಅವರಿಗೆ ಪಕ್ಷ ಸಂಘಟಿಸಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ಮಾಜಿ ಸಿಎಂ ಯಡಿಯೂರಪ್ಪನವರು ಹಾಗೂ ವಿಜಯೇಂದ್ರ ಅವರ ಮನವೊಲಿಕೆಯ ನಂತರ ಸಂಗಣ್ಣ ಕರಡಿ ಅವರ ಮುನಿಸು ಸ್ವಲ್ಪ ತಣ್ಣಗಾಗಿದೆ ಎಂದು ಹೇಳಲಾಗುತ್ತಿದ್ದು, ಪ್ರಚಾರದಲ್ಲಿ ಅವರು ತೊಡಗಿಸಿಕೊಳ್ಳುವರೋ ಇಲ್ಲವೋ ಎನ್ನುವುದು ಕೆಲ ದಿನಗಳಲ್ಲೇ ಗೊತ್ತಾಗಲಿದೆ ಎಂದು ಹೇಳಲಾಗುತ್ತಿದೆ.
ಒಳೇಟಿನ ಭಯ, ಮುನಿಸು ಶಮನಕ್ಕೆ ಯತ್ನ
ಹಾಲಿ ಸಂಸದರಿಗೆ ಟಿಕೆಟ್ ಕಟ್ ಮಾಡಿದ್ದರಿಂದ ಅವರ ಬೆಂಬಲಿಗರಲ್ಲಿ ಭಾರೀ ಅಸಮಾಧಾನ ವ್ಯಕ್ತವಾಗಿತ್ತು. ಮಾರ್ಚ್ ೨೧ರಂದು ಕರಡಿ ಸಂಗಣ್ಣ ಅವರ 8 ವಿಧಾನಸಭಾ ಕ್ಷೇತ್ರದ ಬೆಂಬಲಿಗರು ಕೊಪ್ಪಳದಲ್ಲಿ ಬಹಿರಂಗ ಸಭೆ ನಡೆಸಿ ಹೈಕಮಾಂಡ್‌ನ ಹಲವು ಮುಖಂಡರ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದರು. ಬಿಜೆಪಿಗೆ ಹೊಸ ಅಭ್ಯರ್ಥಿ ಘೋಷಣೆ ಮಾಡಿರುವುದರಿಂದ, ಹಾಲಿ ಸಂಸದರ ಬೆಂಬಲಿಗರು, ಹಿತೈಷಿಗಳು, ಅಭಿಮಾನಿಗಳು ಹಾಗೂ ಪಕ್ಷದ ಕೆಲ ಕಾರ್ಯಕರ್ತರು ಎಲ್ಲಿ ಒಳೇಟು ನೀಡುವರು ಎಂಬ ಭಯದಿಂದಾಗಿ, ಮುನಿಸು ಶಮನಕ್ಕೆ ಹೈಕಮಾಂಡ್ ಬೇಷರತ್ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಟಿಕೆಟ್ ಬದಲಾವಣೆ ಮಾಡಿದರೆ, ರಾಜ್ಯದ ಉಳಿದ ಕ್ಷೇತ್ರದಲ್ಲಿ ಇದೇ ಮಾದರಿಯನ್ನು ಇಟ್ಟುಕೊಂಡು ಬೇರೆಯವರೂ ಕ್ಲೇಮ್ ಮಾಡಬಹುದು ಎನ್ನುವ ಆತಂಕದಿಂದ ಇದ್ದ ಪರಿಸ್ಥಿತಿಯನ್ನು ಮುಂದುವರಿಸಿಕೊAಡು ಹೋಗಲಾಗುತ್ತಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಸಂಗಣ್ಣ ಕರಡಿಯವರನ್ನು ಮೂಲೆಗುಂಪು ಮಾಡಲು ಯತ್ನ, ಆರೋಪ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂಸದರ ಪುತ್ರನಿಗೆ ಟಿಕೆಟ್ ನಿರಾಕರಿಸಿ ಕೊನೆಯಲ್ಲಿ ಅವರ ಸೊಸೆಗೆ ಟಿಕೆಟ್ ನೀಡಲಾಯಿತು, ಟಿಕೆಟ್ ನೀಡುವಲ್ಲಿ ಗೊಂದಲ ಹಾಗೂ ಪಕ್ಷ ಸಂಘಟನೆಗೆ ಸೀಮಿತ ಅವಧಿ ಇದ್ದ ಕಾರಣ ಅವರು ಸೋಲುವಂತಾಯಿತು. ಇನ್ನು ಲೋಕಸಭಾ ಚುನಾವಣೆಯಲ್ಲಿಯೂ ಹಾಲಿ ಸಂಸದರಿದ್ದಾಗ್ಯೂ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ತಪ್ಪಿಸಲಾಗಿದೆ. ಇದು ಬಿಜೆಪಿಯ ಬಣವೊಂದರ ವ್ಯವಸ್ಥಿತ ಹುನ್ನಾರವಾಗಿದೆ. ಸಂಗಣ್ಣ ಕರಡಿ ಅವರ ಕುಟುಂಬವನ್ನು ರಾಜಕೀಯದಿಂದ ಮೂಲೆಗುಂಪು ಮಾಡಲು ಆ ಒಂದು ಬಣ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ ಎಂದು ಅವರ ಬೆಂಬಲಿಗರು ಆರೋಪಿಸಿದ್ದಾರೆ.


Spread the love

Leave a Reply

Your email address will not be published. Required fields are marked *