ನಮ್ಮ ಸಿಂಧನೂರು, ಮಾರ್ಚ್ 30
ಮಧ್ಯಾಹ್ನ ಸುಡು ಬಿಸಿಲು ನೆತ್ತಿ ಸುಡುತ್ತಿದ್ದರೆ, ಕ್ಷಣ ಕ್ಷಣಕ್ಕೂ ದಾಹದಿಂದ ಪರ ಊರಿನ ಪ್ರಯಾಣಿಕರು ನಗರದಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲಸ ಕಾರ್ಯಗಳಿಗೆ ಸಿಂಧನೂರು ನಗರಕ್ಕೆ ಬಂದವರು, ಉದ್ದೇಶಿತ ಗ್ರಾಮಗಳಿಗೆ ತೆರಳಲು ಬಂದ ಪ್ರಯಾಣಿಕರು ಕುಡಿವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಗಂಗಾವತಿ ಮಾರ್ಗದ ರಸ್ತೆಯಲ್ಲಿ ಗಾಂಧಿ ಸರ್ಕಲ್ ಬಳಿಯಿರುವ ಅರವಟಿಗೆಯೊಂದರಲ್ಲಿ ಮಧ್ಯಾಹ್ನವೇ ನೀರು ಖಾಲಿಯಾಗಿತ್ತು. ಬೇರೆ ಗ್ರಾಮದಿಂದ ಬಂದಿದ್ದ ತಾಯಿ, ಮಕ್ಕಳು ದಾಹದಿಂದ ನೀರು ಕುಡಿಯಲು ಹೋದಾಗ, ಗಡಿಗೆಗಳಲ್ಲಿ ನೀರು ಖಾಲಿಯಾಗಿದ್ದು ಕಂಡು ಪೇಚಾಡಿದ ಘಟನೆ ನಡೆಯಿತು.
ಬೇಸಿಗೆಯ ಧಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇತ್ತೀಚೆಗೆ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಹೆಚ್ಚಿದ ತಾಪಮಾನದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕಾದ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಗಳು ಕನಿಷ್ಠ ಕುಡಿವ ನೀರಿನ ಅರವಟಿಗೆಗಳನ್ನು ಸ್ಥಾಪಿಸಿಲ್ಲ. ಸಾರ್ವಜನಿಕ ಪ್ರದೇಶಗಳಿರಲಿ, ತಹಸೀಲ್ ಕಾರ್ಯಾಲಯ, ಸಾರ್ವಜನಿಕ ಆಸ್ಪತ್ರೆ, ಬಸ್ ನಿಲ್ದಾಣ ಸೇರಿದಂತೆ ಇನ್ನಿತರೆ ಸರ್ಕಾರಿ ಇಲಾಖೆಗಳ ಕಾರ್ಯಾಲಯದಲ್ಲಿಯೇ ಸಾರ್ವಜನಿಕರಿಗೆ ಹನಿ ಕುಡಿಯುವ ನೀರು ಸಿಗುವುದಿಲ್ಲ. ಜಿಲ್ಲಾಡಳಿತ ಬಿಸಿಲಿನ ಧಗೆಯ ಹಿನ್ನೆಲೆಯಲ್ಲಿ ಮುಂಜಾಗ್ರತೆ ತೆಗೆದುಕೊಳ್ಳಲಾಗಿದೆ ಎಂದು ಹೇಳುತ್ತಿದೆ, ಎಲ್ಲಿ ಏನು ತೆಗೆದುಕೊಂಡಿದ್ದಾರೋ ಅವರಿಗೇ ಗೊತ್ತು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಅರವಟಿಗೆ ಸ್ಥಾಪಿಸಿ:
ಕೆಲಸ, ಕಾರ್ಯಗಳಿಗೆ ಸಿಂಧನೂರು ನಗರಕ್ಕೆ ಬರುವವರು ಬೇಸಿಗೆಯ ಕಾರಣ ಕುಡಿವ ನೀರಿಗಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ನೀರು ಕುಡಿಯಲು ಅನಿವಾರ್ಯವಾಗಿ ಹೋಟೆಲ್‌ಗಳಿಗೆ ಹೋಗಬೇಕು, ನೀರಿನ ಸಲುವಾಗಿ ಟೀ ಕುಡಿಯಬೇಕಾದ ಪರಿಸ್ಥಿತಿ ಇದೆ. ಇಲ್ಲದೇ ಹೋದರೆ ದುಡ್ಡು ಕೊಟ್ಟು ಬಾಟಲ್ ನೀರು ತೆಗೆದುಕೊಳ್ಳಬೇಕು, ಹತ್ತಾರ ಜನರಿದ್ದರೆ ನೀರಿಗಾಗಿ ಎಲ್ಲಿಂದ ಹಣ ತರಬೇಕು. ಇನ್ನೂ ತಹಸೀಲ್ ಆಫೀಸ್, ಗಂಗಾವತಿ ಮಾರ್ಗದ ರಸ್ತೆಯಲ್ಲಿ ರಕ್ಷಣಾ ವೇದಿಕೆ, ಶಂಕರ್‌ನಾಗ್ ಆಟೋ ಗ್ರಾಮೀಣ ಆಟೋ ಚಾಲಕರ ಸಂಘದವರು ತಮ್ಮ ಸ್ವಂತ ಖರ್ಚಿನಲ್ಲಿ ಅರವಟಿಗೆ ಸ್ಥಾಪಿಸಿದ್ದಾರೆ. ಆದರೆ ಜಿಲ್ಲಾಡಳಿತ ಬೇಸಿಗೆ ಮುಗಿಯುವವರಿಗೆ ಅರವಟಿಗೆಗಳನ್ನಾದರೂ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.