(ಪಬ್ಲಿಕ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮಾರ್ಚ್ 25
ಸಿಂಧನೂರು-ಮಸ್ಕಿ ಹೆದ್ದಾರಿಯಲ್ಲಿ (ಎನ್ನೆಚ್ 150A) ಅರಿಹಂತ್ ರೈಸ್ ಮಿಲ್ ಬಳಿಯಿರುವ ಸಂಪರ್ಕ ಸೇತುವೆಗೆ (ಬ್ರಿಡ್ಜ್) ತಡೆಗೋಡೆ ಕುಸಿದು ಬಿದ್ದಿದ್ದು, ಅಪಘಾತಕ್ಕೆ ಆಹ್ವಾನ ನೀಡಿದಂತಿದೆ. ಈ ಮಾರ್ಗದಲ್ಲಿ ದಿನವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಕಲಬುರಗಿ, ಯಾದಗಿರಿ, ಬೀದರ ಸೇರಿದಂತೆ ಇನ್ನಿತರೆ ಜಿಲ್ಲೆಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿರುವುದರಿಂದ ಭಾರಿ ಸರಕು-ಸಾಗಣೆ ವಾಹನಗಳು ಸೇರಿದಂತೆ ಹಲವು ವಾಹನಗಳೂ ಈ ಮಾರ್ಗದಲಿ ಸಂಚರಿಸುತ್ತವೆ. ಆದರೆ ಸಂಪರ್ಕ ಸೇತುವೆಯ ತಡೆಗೋಡೆ ಕುಸಿದುಬಿದ್ದು ತಿಂಗಳುಗಳೇ ಕಳೆದರೂ ಸಂಬAಧಿಸಿದ ಇಲಾಖೆಯ ಅಧಿಕಾರಿಗಳು ಮಾತ್ರ ಇತ್ತ ಸುಳಿದಿಲ್ಲ ಎಂಬುದು ವಾಹನ ಸವಾರರ ಆರೋಪವಾಗಿದೆ.
ತಡೆಗೋಡೆ ಕುಸಿದು ಬಿದ್ದ ಕಾರಣ ರಾತ್ರಿ ಹೊತ್ತಿನಲ್ಲಿ ಹಲವು ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿರುವ ಬಗ್ಗೆ ವಾಹನ ಸವಾರರು ಉದಾಹರಿಸುತ್ತಾರೆ. ಭಾರೀ ಅನಾಹುತ ಸಂಭವಿಸಿ ಯಾವುದೇ ರೀತಿಯ ಜೀವಹಾನಿಯಾಗುವ ಮುಂಚೆಯೇ ಸಂಬAಧಿಸಿದ ಇಲಾಖೆಯವರು ತಡೆಗೋಡೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸವಾರರು ಒತ್ತಾಯಿಸಿದ್ದಾರೆ.