(ಪೊಲಿಟಿಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮಾರ್ಚ್ 23
ಹಾಲಿ ಸಂಸದರಿದ್ದಾಗ್ಯೂ ಟಿಕೆಟ್ ಕಟ್ ಆಗಿದ್ದರಿಂದ ಮುನಿಸಿಕೊಂಡಿರುವ ಸಂಗಣ್ಣ ಕರಡಿ ಅವರಿಗೆ ಹೈಕಮಾಂಡ್ ಮಾರ್ಚ್ 24ರಂದು ಬೆಂಗಳೂರಿಗೆ ಬರುವಂತೆ ಆಹ್ವಾನಿಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಕೆಲ ಹಿರಿಯ ನಾಯಕರು ನನ್ನ ಜೊತೆ ಮಾತನಾಡಿದ್ದಾರೆ, ಅವರು ಬೆಂಗಳೂರಿಗೆ ಬರುವಂತೆ ಮಾತುಕತೆಗೆ ಕರೆದಿದ್ದಾರೆ. ಈ ಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್.ಅಶೋಕ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಇದ್ದರೆ ಮಾತ್ರ ಸಭೆಗೆ ಬರುವುದಾಗಿ ಸಂಗಣ್ಣ ಅವರು ಖಡಕ್ಕಾಗಿ ಹೇಳಿದ್ದಾರೆಂಬ ಮಾಹಿತಿ ಗೊತ್ತಾಗಿದೆ.
ಮಾರ್ಚ್ 21ರಂದು ನಡೆದ ಬೆಂಬಲಿಗರ ಸಭೆಯಲ್ಲಿ ಬಹಳಷ್ಟು ಜನರು ತಮ್ಮ ಮನದಾಳವನ್ನು ವ್ಯಕ್ತಪಡಿಸಿ, ಟಿಕೆಟ್ ನೀಡದೇ ಇರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕೊಪ್ಪಳ ಲೋಕಸಭೆಯ 8 ಕ್ಷೇತ್ರದ ನಾಯಕರು, ಬೆಂಬಲಿಗರು, ಅಭಿಮಾನಿಗಳು, ಬಿಜೆಪಿ ಹೈಕಮಾಂಡ್ ಏಕಾಏಕಿ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ ಎಂದು ತಮ್ಮ ಮನದಿಂಗಿತವನ್ನು ತಮ್ಮ ಮುಂದೆ ತಿಳಿಸಿದ್ದಾರೆ. ಹಾಗಾಗಿ ತಾವು ಹೇಳಿದಂತೆ ನಾಲ್ವರು ಪ್ರಮುಖ ನಾಯಕರು ಸಭೆಯಲ್ಲಿ ಇದ್ದರೆ ಮಾತ್ರ 8 ವಿಧಾನಸಭಾ ಕ್ಷೇತ್ರಗಳ ಪ್ರಮುಖ ನಾಯಕರನ್ನು ಕರೆದುಕೊಂಡು ಬರುತ್ತೇನೆ ಎಂದು ಸಂಗಣ್ಣ ಕರಡಿ ಅವರು ಹೈಕಮಾಂಡ್ನ ಗಮನಕ್ಕೆ ತಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಬಿಜೆಪಿ ಅಭ್ಯರ್ಥಿ ಘೋಷಿಸಿರುವುದರಿಂದ, ಸಂಗಣ್ಣ ಕರಡಿ ಅವರು ಹಾಗೂ ಅವರ ಬೆಂಬಲಿಗರ ಅಸಮಾಧಾನ ಹೆಚ್ಚಿದ್ದು, ಇದನ್ನು ಶಮನ ಮಾಡಲು ಹೈಕಮಾಂಡ್ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆಂದು ಹೇಳಲಾಗುತ್ತಿದೆ. ಹೀಗಾಗಿ ವಿಧಾನ ಪರಿಷತ್ ಇಲ್ಲವೇ ರಾಜ್ಯಸಭಾ ಸ್ಥಾನ ಮಾನ ಸೇರಿದಂತೆ ಪಕ್ಷದ ಪ್ರಮುಖ ಹುದ್ದೆ ನೀಡುವ ಕುರಿತು ಭರವಸೆ ನೀಡಿ, ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂಬ ಮಾಹಿತಿ ಇದ್ದು, ಇದಕ್ಕೆ ಸಂಗಣ್ಣ ಅವರು ಪಟ್ಟು ಸಡಿಲಿಸುತ್ತಿಲ್ಲ ಎಂಬ ಬಗ್ಗೆ ತಿಳಿದುಬಂದಿದೆ. 24ರ ನಂತರವೇ ಅಂತಿಮ ಚಿತ್ರಣ ಹೊರ ಬೀಳಲಿದೆ ಎಂದು ಹೇಳಲಾಗುತ್ತಿದೆ.