ನಮ್ಮ ಸಿಂಧನೂರು, ಮಾರ್ಚ್ 20
ಕೊಲೆ ಪ್ರಕರಣದಲ್ಲಿ ಐದು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ರೂ.12,500 ದಂಡ ವಿಧಿಸಿ ಮಾನ್ಯ ನ್ಯಾಯಾಧೀಶರಾದ ಬಿ.ಬಿ.ಜಕಾತಿ ೩ನೇ ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು, ಪೀಠಾಸೀನ ಸಿಂಧನೂರು ಇವರು ಮಾರ್ಚ್ 20ರಂದು ತೀರ್ಪು ನೀಡಿದ್ದಾರೆ.
ಸಿಂಧನೂರು ತಾಲೂಕಿನ ಗಿಣಿವಾರ ಗ್ರಾಮದ ನಿಂಗಣ್ಣ, ಶಿವಪ್ಪ, ಉಪ್ಪಾಳೆಪ್ಪ, ನಿಂಗಣ್ಣ ತಂದೆ ಮಲ್ಲಪ್ಪ, ರಾಮ ಮತ್ತು ಈರಣ್ಣ ಆರೋಪಿತರು. ನಿಂಗಣ್ಣ ಈತನ ಹೆಂಡತಿಯೊಂದಿಗೆ ಮೃತ ಮಲ್ಲಯ್ಯ ಅನೈತಿಕ ಸಂಬಂಧ ಹೊಂದಿದ್ದಾನೆಂದು ಸಂಶಯದಿಂದಾಗಿ ಸಿಟ್ಟಾಗಿ ಆರೋಪಿತರು ದಿನಾಂಕ: 28-04-2014 ರಂದು ಮಧ್ಯಾಹ್ನ 2.30 ಗಂಟೆ ಸುಮಾರಿಗೆ, ಗಿಣಿವಾರ ಗ್ರಾಮದಲ್ಲಿ ಮಲ್ಲಯ್ಯನ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರಿಂದ ಅವರ ವಿರುದ್ಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಅಧಿವಿಚಾರಣೆಯಲ್ಲಿ 4ನೇ ಆರೋಪಿ ನಿಂಗಣ್ಣ ತಂದೆ ಮಲಪ್ಪ ಮರಣ ಹೊಂದಿರುತ್ತಾನೆ. ಆರೋಪಿತರ ವಿರುದ್ಧ ಅಂದಿನ ತನಿಖಾಧಿಕಾರಿಯಾದ ರಮೇಶ ರೊಟ್ಟಿ ಅವರು ತನಿಖೆ ಕೈಗೊಂಡು ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಪ್ರಕರಣದ ವಾದ-ವಿವಾದಗಳನ್ನು ಆಲಿಸಿದ ಮಾನ್ಯ ನ್ಯಾಯಾಧೀಶರು, ಸಾಕ್ಷ್ಯಾಧಾರಗಳನ್ನು ಪರಾಮರ್ಶಿಸಿ, ಭಾರತೀಯ ದಂಡ ಸಂಹಿತೆ ಸೆಕ್ಷನ್ 143, 147,148,302 ರೀಡ್ ವಿತ್ ಸೆಕ್ಷನ್ 149ರ ಅಡಿ ಆರೋಪಿತರು ಅಪರಾಧ ಎಸಗಿದ್ದಾರೆಂದು ಪರಿಗಣಿಸಿ 1ರಿಂದ 3 ಮತ್ತು 5ನೇ ಆರೋಪಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ತಲಾ ರೂ.12,500 ದಂಡ ಹಾಗೂ 6ನೇ ಆರೋಪಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 109,143,147,148, 302 ರೀಡ್ ವಿತ್ 149ರ ಅಡಿ ಅಪರಾಧವೆಸಗಿರುವುದು ಸಾಬೀತಾಗಿದ್ದರಿಂದ ಕಾರಾಗೃಹ ಶಿಕ್ಷೆ ಹಾಗೂ ರೂ.12,500 ದಂಡ ವಿಧಿಸಿದ್ದು, ದಂಡದ ಹಣದಲ್ಲಿ ಮೃತನ ಹೆಂಡತಿಯಾದ ಹುಚ್ಚಮ್ಮ ಈಕೆಗೆ ರೂ.60,000 ಪರಿಹಾರ ಹಣವನ್ನು ಪಾವತಿಸಲು ಮಾನ್ಯ ನ್ಯಾಯಾಲಯವು ತೀರ್ಪು ನೀಡಿರುತ್ತದೆ. ಪ್ರಕರಣದಲ್ಲಿ ಸರಕಾರದ ಪರವಾಗಿ ಆರ್.ಎ.ಗಡಕರಿ ಸರಕಾರಿ ಅಭಿಯೋಜಕರು ವಾದ ಮಂಡಿಸಿದ್ದರು.