ಸ್ಪೆಷಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 24
ಖರೀದಿ ಕೇಂದ್ರಗಳಲ್ಲಿ ಹಿಂಗಾರು ಹಂಗಾಮು ಹೈಬ್ರಿಡ್ ಜೋಳ ಖರೀದಿಗೆ ಜೂನ್ 30 ಕೊನೆಯ ದಿನ ನಿಗದಿಪಡಿಸಿದ್ದು, ಇನ್ನೂ 6 ದಿನ ಬಾಕಿ ಇರುವುದರಿಂದ ರೈತರಲ್ಲಿ ಆತಂಕ ಮನೆ ಮಾಡಿದೆ.
ಜೂನ್ 10ರಿಂದ ಆರಂಭವಾದ ಖರೀದಿ ಪ್ರಕ್ರಿಯೆ ಸರ್ವರ್ ಡೌನ್, ಸಿಡಬ್ಲ್ಯುಸಿ ಗೋದಾಮು ಸಿಬ್ಬಂದಿಯ ದ್ವಂದ್ವ ನಿಲುವಿನಿಂದ ಉಂಟಾದ ಗೊಂದಲ, ಮಳೆ ಸೇರಿ ಇನ್ನಿತರೆ ತಾಂತ್ರಿಕ ಕಾರಣಗಳಿಂದಾಗಿ ಪ್ರಾರಂಭದಲ್ಲಿ ವಿಳಂಬವಾಗಿತ್ತು. ತದನಂತರ ವೇಗ ಪಡೆದುಕೊಂಡರೂ, ಜೂನ್ 30ರ ಒಳಗಾಗಿ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಖರೀದಿ ನಂತರ ಹಲವರು ಬಯೋಮೆಟ್ರಿಕ್ (ಆನ್‌ಲೈನ್‌ನಲ್ಲಿ ಹೆಬ್ಬೆಟ್ಟು ಗುರುತು) ಹಾಕಿದ್ದರೆ, ಇನ್ನೂ ಹಲವು ರೈತರು ಬಯೋಮೆಟ್ರಿಕ್ ಬಾಕಿ ಉಳಿದುಕೊಂಡಿದೆ ಎಂದು ತಿಳಿದುಬಂದಿದೆ.
ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದು, ನಿಗದಿತ ಸಮಯದೊಳಗೆ ಮುಗಿಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ನೋಂದಣಿ ಮಾಡಿಕೊಂಡು ಸರದಿಯಲ್ಲಿರುವ ರೈತರು ತಮ್ಮ ಜೋಳ ಖರೀದಿಯಾಗಿ ಬಯೋಮೆಟ್ರಿಕ್ ಆಗುತ್ತದೆಯೋ ಇಲ್ಲವೋ ಎನ್ನುವ ಅನುಮಾನದಲ್ಲಿದ್ದಾರೆ.
ವಾರಕಾಲ ದಿನಾಂಕ ವಿಸ್ತರಿಸಲು ಮನವಿ
ಮಳೆ, ತಾಂತ್ರಿಕ ಕಾರಣಗಳಿಂದ ಖರೀದಿ ಪ್ರಕ್ರಿಯೆಯಲ್ಲಿ ವಿಳಂಬವಾಗಿರುವುದರಿಂದ ರೈತರಿಗೆ ಸಮಸ್ಯೆಯಾಗಿದೆ. ಹಾಗಾಗಿ ಜುಲೈ 10ರವರೆಗೆ ದಿನಾಂಕ ವಿಸ್ತರಿಸಿದರೆ ರೈತರಿಗೆ ಅನುಕೂಲವಾಗಲಿದೆ. ಇಲ್ಲದೇ ಹೋದರೆ ಒಂದಿಷ್ಟು ರೈತರ ಜೋಳ ಖರೀದಿ ಪ್ರಕ್ರಿಯೆಯಿಂದ ಹೊರಗುಳಿಯುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ದಿನಾಂಕ ವಿಸ್ತರಿಸಬೇಕೆಂಬುದು ರೈತರ ಒತ್ತಾಯವಾಗಿದೆ.