ಲೋಕಲ್ ನ್ಯೂಸ್; ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 23
ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾರ್ಯಾಲಯದ ಕಟ್ಟಡ ಕಾಮಗಾರಿ ಕಳೆದ ಹಲವು ದಿನಗಳಿಂದ ಆಮೆಗತಿಯಲ್ಲಿ ನಡೆದಿದೆ. ಹೊಸ ಕಟ್ಟಡಕ್ಕೆ ಸುಣ್ಣ ಬಳಿಯಲಾಗಿದ್ದು, ಒಳ ಕೊಠಡಿಗಳಲ್ಲಿ ಟೈಲ್ಸ್ ಅಳವಡಿಸುವ ಕೆಲಸ ಪೂರ್ಣಗೊಂಡಿದೆ. ಇನ್ನೂ ವಿದ್ಯುತ್ ಉಪಕರಣಗಳ ಅಳವಡಿಕೆ, ಬಾಗಿಲು ನಿರ್ಮಾಣ, ಫೈನಲ್ ಫಿನಿಶಿಂಗ್, ಶೌಚಾಲಯ, ನೀರು ಸಂಗ್ರಹಣ ವ್ಯವಸ್ಥೆ ಸೇರಿದಂತೆ ಇನ್ನಿತರೆ ಕೆಲಸಗಳು ಬಾಕಿ ಉಳಿದುಕೊಂಡಿವೆ ಎಂದು ತಿಳಿದುಬಂದಿದೆ.
ಹಳೆ ಕಟ್ಟಡದಲ್ಲಿ ಕಾರ್ಯನಿರ್ವಹಣೆ
ಸದ್ಯ ಈಗ ತಾಲೂಕು ಪಂಚಾಯಿತಿ ಕಾರ್ಯಾಲಯ ಹಳೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಾಗ ಇಕ್ಕಟ್ಟಾಗಿರುವುದರಿಂದ ಕೆಲಸ ಕಾರ್ಯಗಳಿಗೆ ಸಮಸ್ಯೆಯಾಗಿದೆ. ಒಂದು ಕಟ್ಟಡದಲ್ಲಿ ಸಭಾಭವನ ವ್ಯವಸ್ಥೆ ಇದ್ದರೆ, ಇನ್ನೊಂದು ಕಟ್ಟಡದಲ್ಲಿ ತಾ.ಪಂ.ನ ಹಲವು ವಿಭಾಗಗಳ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೊಸ ಕಟ್ಟಡ ನಿರ್ಮಾಣವಾದರೆ ಕೊಠಡಿ ಕೊರತೆಗೆ ಇತಿಶ್ರೀ ಹಾಡಬಹುದು ಮತ್ತು ಅಧಿಕಾರಿಗಳು ಒಂದೇ ಕಡೆ ಕಾರ್ಯನಿರ್ವಹಿಸಲು ಸುಲಭವಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.