ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಫೆಬ್ರವರಿ 5
ಹದಿನಾರು ವರ್ಷ ಕಳೆದರೂ ಗುತ್ತಿಗೆದಾರರಿಗೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯಿಂದ ಬಿಲ್ ಪಾವತಿಸದ ಕಾರಣ, 2ನೇ ಬಾರಿಗೆ ಇಲಾಖೆಯ ವಾಹನ ಜಪ್ತಿಗೆ ನಗರದ ಹಿರಿಯ ಶ್ರೇಣಿ ನ್ಯಾಯಾಲಯ ಆದೇಶಿಸಿದೆ.
ಕಳೆದ ಬಾರಿ ಜಪ್ತಿಗೆ ಆದೇಶಿಸಿದಾಗ ತಡೆಯಾಜ್ಞೆ ತಂದು ಬಚಾವಾಗಿದ್ದ ಇಲಾಖೆ ಅಧಿಕಾರಿಗಳು, ನಂತರದಲ್ಲಿ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿ 2 ತಿಂಗಳೊಳಗೆ ಗುತ್ತಿಗೆದಾರರಿಗೆ ಬಿಲ್ಪಾವತಿ ಮಾಡುವುದಾಗಿ ಕೋರಿಕೊಂಡಿದ್ದರು. ಆದರೆ, 2 ತಿಂಗಳು ಕಾಲಾವಕಾಶ ಮುಗಿದರೂ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡದ ಕಾರಣ, ಪುನಃ 2ನೇ ಬಾರಿಗೆ ಇಲಾಖೆ ವಾಹನವನ್ನು ಜಪ್ತಿ ಮಾಡಲು ನ್ಯಾಯಾಲಯ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ, ಗುತ್ತಿಗೆದಾರರ ಪರ ವಕೀಲರೊಂದಿಗೆ ನ್ಯಾಯಾಲಯದ ಅಧಿಕಾರಿಗಳು ಇಲಾಖೆಯ ಬುಲೆರೊ ವಾಹನವನ್ನು ಗುರುವಾರ ಜಪ್ತಿ ಮಾಡಿದರು. ಆಗ ಬೇರೆ ದಾರಿಯಿಲ್ಲದೇ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಸಹಾಯಕರಾಗಿ ವಾಹನದ ಚಾಲಕನೊಂದಿಗೆ ಮಾತನಾಡಿ ಆಫೀಸ್ನಿಂದ ನಡೆದುಕೊಂಡ ಹೊರಹೋದರು.
ಪ್ರಕರಣದ ಹಿನ್ನೆಲೆ
ತಾಲೂಕಿನ ವೀರಾಪುರ ಗ್ರಾಮದಲ್ಲಿ 2009-10ನೇ ಸಾಲಿನ ನೆರೆಹಾವಳಿ ಯೋಜನೆ ಅಡಿಯಲ್ಲಿ 16 ವರ್ಷಗಳ ಹಿಂದೆ ರೂ.4 ಲಕ್ಷ ವೆಚ್ಚದಲ್ಲಿ ಪ್ರಾಥಮಿಕ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆದಾರ ಚನ್ನಬಸಪ್ಪ ಹತ್ತಿಗುಡ್ಡ ಇಲಾಖೆಯ ಆದೇಶದಂತೆ ನಿರ್ವಹಿಸಿದ್ದರು. ಕಾಮಗಾರಿ ಪೂರ್ಣಗೊಂಡ ನಂತರ ಬಿಲ್ ಪಾವತಿಸುವಂತೆ ಪಂಚಾಯತ್ ರಾಜ್ ಇಂಜಿನಿಯರಿAಗ್ ಇಲಾಖೆ ಸಿಂಧನೂರು ಉಪ ವಿಭಾಗದ ಅಧಿಕಾರಿಗಳ ಮೊರೆ ಹೋಗಿದ್ದರು. ಕಾಮಗಾರಿ ಬಿಲ್ ಬಿಡುಗಡೆ ಮಾಡಲು ಹಲವು ವರ್ಷಗಳ ಕಾಲ ಅಧಿಕಾರಿಗಳು ಸತಾಯಿಸಿದ ಕಾರಣ ಗುತ್ತಿಗೆದಾರರು ಕಾನೂನು ಮೊರೆ ಹೋಗಿದ್ದರು.
ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ದಾವೆ ದಾಖಲು
ಗುತ್ತಿಗೆದಾರರು ಸಿಂಧನೂರಿನ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದ್ದರು. ನ್ಯಾಯಾಲಯ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದರೂ ಸಹ ಇಲಾಖೆಯ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹಾಗಾಗಿ ಪ್ರಕರಣದ ದಾಖಲಾತಿಗಳನ್ನು ವಿಚಾರಣೆಗೆ ಒಳಪಡಿಸಿದ ನ್ಯಾಯಾಲಯ ಏಕಪಕ್ಷೀಯ ಆದೇಶದೊಂದಿಗೆ ಒಟ್ಟು ಬಿಲ್ ಬಾಕಿ ಮೊತ್ತ ರೂ.2,12,756ಗೆ 2010ರಿಂದ ಬಡ್ಡಿ ಸೇರಿ ಒಟ್ಟು ರೂ.8,22,516 ಗಳನ್ನು ಗುತ್ತಿಗೆದಾರರಿಗೆ ನೀಡಬೇಕೆಂದು ದಿ: 15-03-2025ರಂದು ಆದೇಶ ಹೊರಡಿಸಿದ್ದರೂ ಸಹ ಇಲಾಖೆಯ ಅಧಿಕಾರಿಗಳು ನಿರ್ಲಕ್ಷö್ಯ ವಹಿಸಿದ್ದರು.
ಆದೇಶ ಜಾರಿ ಪ್ರಕರಣ ದಾಖಲು
ತದನಂತರ ಗುತ್ತಿಗೆದಾರರು ನ್ಯಾಯಾಲಯದ ಆದೇಶದ ಪಾಲನೆಗೆ ಮತ್ತೊಂದು ಆದೇಶ ಜಾರಿ ಪ್ರಕರಣವನ್ನು ದಾಖಲು ಮಾಡಿದ್ದರು. ನ್ಯಾಯಾಲಯ ಆದೇಶ ಜಾರಿ ಪ್ರಕರಣದ ಮೇಲೆ ದಿ:10-06-2025ರಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜಿಲ್ಲಾ ಪಂಚಾಯಿತಿ ರಾಯಚೂರು, ಇಇ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ರಾಯಚೂರು ಮತ್ತು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಉಪ ವಿಭಾಗ ಸಿಂಧನೂರು ಇವರ ವಾಹನಗಳ ಜಪ್ತಿಗೆ ವಾರಂಟನ್ನು ಹೊರಡಿಸಿತ್ತು.
ತಡೆಯಾಜ್ಞೆ
ದಿ.15-07-2025ರಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗ ಇವರ ಬುಲೆರೊ ವಾಹನ (ಕೆಎ36, ಜಿ0852) ವನ್ನು ನ್ಯಾಯಾಲಯದ ಸಿಬ್ಬಂದಿ ಮತ್ತು ಪ್ರಕರಣ ದಾಖಲಿಸಿದ ಗುತ್ತಿಗೆದಾರ ಮತ್ತು ಅವರ ವಕೀಲರಾದ ಮಿಥುನ್ ಕುಮಾರ್ ಅವರ ಸಮ್ಮುಖದಲ್ಲಿ ಜಪ್ತಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿತ್ತು. ತದನಂತರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗ ಇವರು ಅದೇ ದಿನ ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಕಾರಣ ನ್ಯಾಯಾಲಯವು ಈ ವಾಹನವನ್ನು ಬಿಡುಗಡೆಗೊಳಿಸಿತ್ತು.

ಮುಗಿದ ಕಾಲಾವಕಾಶ, 2ನೇ ಬಾರಿಗೆ ವಾಹನ ಜಪ್ತಿ ಆದೇಶ
ಮೊದಲನೆ ಸಲ ಜಪ್ತಿ ಮಾಡಿದಾಗ ಇಲಾಖೆಯ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿ, ಖುದ್ದು ಪ್ರಮಾಣಪತ್ರ ಸಲ್ಲಿಸಿ ಹಣ ಪಾವತಿಸುವ ಬಗ್ಗೆ ಕಾಲಾವಕಾಶ ಪಡೆದಿದ್ದ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ನಂತರ ತಾವು ಸಲ್ಲಿಸಿದ ಪ್ರಮಾಣಪತ್ರದಂತೆ ನ್ಯಾಯಾಲಯಕ್ಕೆ ಹಣವನ್ನು ಪಾವತಿಮಾಡದ ಕಾರಣ, ಮಾನ್ಯ ಗೌರವಾನ್ವಿತ ಹಿರಿಯ ಶ್ರೇಣಿ ನ್ಯಾಯಾಲಯ ಸಿಂಧನೂರು ನ್ಯಾಯಾಧೀಶರಾದ ಲಕ್ಷಿö್ಮಕಾಂತ ಜಾನಕೀರಾಮ್ ಮಿಸ್ಕಿನ್ ಇವರು ಪುನಃ ಎರಡನೇ ಬಾರಿಗೆ ದಿ:05-02-2026ರಂದು ಜಪ್ತಿ ವಾರಂಟ್ ಆದೇಶ ಹೊರಡಿಸಿದ್ದರು. ಅದರಂತೆ ಗುರುವಾರ ಗುತ್ತಿಗೆದಾರರ ಪರ ವಕೀಲರಾದ ಮಿಥುನ್ ಕುಮಾರ್ ಹಾಗೂ ನ್ಯಾಯಾಲಯದ ಸಿಬ್ಬಂದಿಯವರಾದ ಬೇಲಿಫ್ ಅಮರೇಗೌಡ ವಂದಲಿ, ಮಹಾಂತೇಶ ಜಪ್ತಿ ಮಾಡಿದರು. ಈ ಸಂದರ್ಭದಲ್ಲಿ ಗುತ್ತಿಗೆದಾರ ಚನ್ನಬಸಪ್ಪ ಹತ್ತಿಗುಡ್ಡ, ಬಸವರಾಜ ತುರ್ವಿಹಾಳ, ಸುರೇಶ ಗೊರೇಬಾಳ ಇದ್ದರು. ಜಪ್ತಿಯಾದ ವಾಹನವನ್ನು ನ್ಯಾಯಾಲಯದ ಸುಪರ್ದಿಗೆ ಒಪ್ಪಿಸಲಾಯಿತು.

