ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ನವೆಂಬರ್ 18
ನಗರದ ಸರ್ಕಾರಿ ಮಹಾವಿದ್ಯಾಲಯದ ಪಿಡಿಒ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಬೆಳಗಿನ ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆಯ ಬಹಿಷ್ಕರಿಸಿ, ಕುಷ್ಟಗಿ-ಸಿಂಧನೂರು ಹೆದ್ದಾರಿಯಲ್ಲಿ ಭಾನುವಾರ ಬೆಳಿಗ್ಗೆ ದಿಢೀರ್ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದ 12 ಪರೀಕ್ಷಾರ್ಥಿಗಳ ಮೇಲೆ ಕೇಸ್ ದಾಖಲಾಗಿದೆ. ಪರೀಕ್ಷಾ ಕೇಂದ್ರದ ಮೇಲ್ವಿಚಾರಕ ಬಸವರಾಜ ತಡಕಲ್ ಅವರು ನೀಡಿದ ದೂರಿನ ಆಧಾರ ಮೇಲೆ ಶಹರ ಪೊಲೀಸ್ ಠಾಣೆಯ ದುರುಗಪ್ಪ ಡೊಳ್ಳಿನ್ ಪ್ರಕರಣ ದಾಖಲಿಸಿದ್ದಾರೆ. ಪಶುಪತಿ ಎಂಬ ಪರೀಕ್ಷಾರ್ಥಿಯನ್ನು ಬಂಧಿಸಲಾಗಿದೆ.
ಭಾನುವಾರ ನಡೆದ ಪಿಡಿಒ ಪರೀಕ್ಷೆಯಲ್ಲಿ ಪಶುಪತಿ ಎಂಬ ಪರೀಕ್ಷಾರ್ಥಿ ಪ್ರಶ್ನೆ ಪತ್ರಿಕೆಗಳನ್ನು ವಿತರಿಸುವ ಸಮಯದಲ್ಲಿ ಪತ್ರಿಕೆಯ ಬಂಡಲ್ ಮೊದಲೇ ತೆಗೆಯಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿ ಪ್ರಶ್ನೆ ಪತ್ರಿಕೆಗಳು ಬಯಲಾಗಿವೆ ಎಂದು ಕೂಗುತ್ತಾ ಪರೀಕ್ಷಾರ್ಥಿಗಳಿಗೆ ಪ್ರಚೋದನೆ ಮಾಡಿ ಹೊರಗೆ ಕರೆ ತಂದ್ದಲ್ಲದೆ ಹೆದ್ದಾರಿಯಲ್ಲಿ ಕುಳಿತು ಸಾರ್ವಜನಿಕ ಸಂಚಾರಕ್ಕೆ ತಡೆ ಮಾಡಿದ್ದಾರೆ ಪಶುಪತಿಯ ಜೊತೆಗೆ ಸುರಪುರದ ಬಾಬು, ಅಯ್ಯನಗೌಡ, ಅಮಿತ್, ವೆಂಕಟೇಶ್, ರವಿಶಂಕರ್, ವಿಶ್ವರಾಧ್ಯ, ಬಸವರಾಜ್, ರಾಘವೇಂದ್ರ, ವೆಂಕಟೇಶ, ಸಾಬರೆಡ್ಡಿ ಅವರು ಸಹ ಪರೀಕ್ಷಾ ಕೊಠಡಿಯಲ್ಲಿ ಮೇಲ್ವಿಚಾರಕರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪರೀಕ್ಷಾ ಮುಖ್ಯಸ್ಥ ಬಸವರಾಜ್ ತಡಕಲ್ ದೂರು ನೀಡಿದ್ದಾರೆ ಎಂದು ತಿಳಿದುಬಂದದೆ. ಪೊಲೀಸ್ ಇನ್ಸ್ಪೆಕ್ಟರ್ ದುರ್ಗಪ್ಪ ಡೊಳ್ಳಿನವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.