ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ನವೆಂಬರ್ 14
ನಗರದ ತಹಸಿಲ್ ಕಾರ್ಯಾಲಯದಲ್ಲಿ ಲಿಂಗಸುಗೂರು ಉಪ ವಿಭಾಗದ ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟರ್, ತಹಸೀಲ್ದಾರ್ ಅರುಣಕುಮಾರ ದೇಸಾಯಿ ಅವರ ಸಮ್ಮುಖದಲ್ಲಿ ನಡೆದ ಕಂದಾಯ ನಿರೀಕ್ಷಕರು, ವಿಎ ಸೇರಿದಂತೆ ಇಲಾಖೆಯ ಇತರೆ ಅಧಿಕಾರಿಗಳೊಂದಿನ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರು, ಕಡತ ಹಾಗೂ ಸಾರ್ವಜನಿಕರ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವ ಮೂಲಕ ವಿಳಂಬವಾಗುವುದನ್ನು ತಡೆಯುವಂತೆ ಸೂಚಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳು ಹಳ್ಳಿಗಳಲ್ಲಿಯೇ ಇದ್ದು ಜನಸಾಮಾನ್ಯರ ಕೆಲಸ-ಕಾರ್ಯಗಳನ್ನು ಶೀಘ್ರ ಗತಿಯಲ್ಲಿ ಮುಗಿಸಿಕೊಡಬೇಕು. ಬೆಳೆಸರ್ವೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಸಿ ರೈತರಿಗೆ ಸರ್ಕಾರದಿಂದ ಬರುವ ಅನುಕೂಲಗಳನ್ನು ಸಮರ್ಪಕವಾಗಿ ತಲುಪಿಸಬೇಕು ಎಂದು ಅವರು ಅಧಿಕಾರಿಗಳು ಸೂಚಿಸಿದರು.
ಈ ಸಂದರ್ಭದಲ್ಲಿ ಪಹಣಿ ತಿದ್ದುಪಡಿ ಅರ್ಜಿಗಳು, ಪೋಡಿ ಮುಕ್ತ, ಜನಸ್ಪಂದನ ಸಭೆ, ಮಾಸಾಶನ ಅಭಿಯಾನ, ಸರಕಾರಿ ಭೂಮಿ, ಇಲಾಖೆಯ ಕಬ್ಜಾದಲ್ಲಿರುವುದು, ಒತ್ತುವರಿಯಾಗಿರುವುದೆಷ್ಟು ? ಸರಕಾರಿ ಭೂಮಿ ರಕ್ಷಣೆಗೆ ಕೈಗೊಂಡ ಕ್ರಮ, ರೈತರ ಆತ್ಮಹತ್ಯೆ ಪ್ರಕರಣಗಳು ಮತ್ತು ಪರಿಹಾರ, ಬೆಳೆ ಹಾನಿ ಮಾಹಿತಿ, ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ಹಲವು ವಿಷಯಗಳನ್ನು ಅಧಿಕಾರಿಗಳ ಮುಂದೆ ಪ್ರಸ್ತಾಪಿಸಿದ ಎಮ್ಮೆಲ್ಸಿ ಅವರು ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಜನಸಾಮಾನ್ಯರಿಗೆ ಸೌಲಭ್ಯಗಳನ್ನು ಒದಗಿಸುವಂತೆ ಹೇಳಿದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ವಿವಿಧ ಅಧಿಕಾರಿಗಳು ಇದ್ದರು.