ಮೂಡ್ ಆಫ್ ಸಿಂಧನೂರು: ವಿಶ್ಲೇಷಣೆ
ನಮ್ಮ ಸಿಂಧನೂರು, ಡಿಸೆಂಬರ್ 14
ರಾಜಕಾರಣಿಯೊಬ್ಬರು ನಡೆಸಿದ ‘ಸಂ-ವಾದ’ದಲ್ಲಿ ಕೆಲ ಸುದ್ದಿಗಾರರು ಮುಗಿಬಿದ್ದು ಸಲಹೆ ನೀಡಿರುವುದು, ಪ್ರಶ್ನೆ ಎತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪ್ರಭಾವಿ ರಾಜಕಾರಣಿಯೊಬ್ಬರು ಮುಂಬರುವ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಡೆಸಿದ್ದಾರೆನ್ನಲಾದ ‘ಸಂ-ವಾದ’, ಸಾರ್ವಜನಿಕ ಹಾಗೂ ಸುದ್ದಿಗಾರರ ವಲಯದಲ್ಲಿ ಪರ/ವಿರೋಧಾಭಿಪ್ರಾಯಕ್ಕೆ ವೇದಿಕೆಯಾಗಿದೆ.
“ಇತ್ತೀಚೆಗೆ ಕೆಲ ರಾಜಕಾರಣಿಗಳು ಸಂವಾದ, ಸಭೆ, ಅಭಿವೃದ್ಧಿ ಚರ್ಚೆ ಹೀಗೆ ಸಾರ್ವಜನಿಕ ವಿಷಯಗಳನ್ನು ಮುನ್ನೆಲೆಯಲ್ಲಿ ತೇಲಿಬಿಟ್ಟು ಪ್ರಚಾರಕ್ಕೆ ಮುಂದಾಗುವದು ಹಾಗೂ ಸುದ್ದಿಗಾರರನ್ನು ಪರೋಕ್ಷವಾಗಿ ‘ಸೆಳೆಯಲು’ ಹೊರಡುವುದು ನಡೆಯುತ್ತಿದೆ. ಯಾವಾಗಲೂ ಪ್ರತಿಪಕ್ಷವಾಗಿ ಕೆಲಸ ಮಾಡುವ ಮಾಧ್ಯಮದವರು ಬಹಿರಂಗವಾಗಿ ಪಕ್ಷ ರಾಜಕಾರಣಿಗಳ ಕಾರ್ಯಕ್ರಮದಲ್ಲಿ ಗುಂಪು ಗುಂಪಾಗಿ ಕಂಡುಬರುವುದನ್ನು, ಸಾರ್ವಜನಿಕರು ಏನೆಂದು ತಿಳಿದುಕೊಳ್ಳಬೇಕು?” ಎಂದು ಸಂಘಟನೆಯ ಮುಖಂಡರೊಬ್ಬರು ವಿಶ್ಲೇಷಿಸುತ್ತಾರೆ.
ಜನಸಾಮಾನ್ಯರ ನಿರೀಕ್ಷೆ ?
“ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಆಯಾ ಪಕ್ಷಗಳ ರಾಜಕಾರಣಿಗಳು ತಯಾರಿ ನಡೆಸುತ್ತಿದ್ದು, ಪ್ರಚಾರದ ಭಾಗವಾಗಿ ಒಂದಿಲ್ಲೊAದು ಕಾರ್ಯಕ್ರಮ ಹೊಸೆಯುವುದು ಸಾಮಾನ್ಯವಾಗಿದೆ. ಉಳಿದ ಪಕ್ಷಗಳ ಮುಖಂಡರು ಸಹ ಸುದ್ದಿಗಾರರೊಂದಿಗೆ ‘ಸಂ-ವಾದ’ಗಳನ್ನು ಶುರುವಿಟ್ಟುಕೊಂಡು ಸೆಳೆಯಲು ಹೊರಟರೆ, ನಿಷ್ಪಕ್ಷಪಾತದ ಸುದ್ದಿ ಬಯಸುವ ಸಾರ್ವಜನಿಕರು ಹಾಗೂ ಜನಸಾಮಾನ್ಯರ ನಿರೀಕ್ಷೆಯ ಗತಿಯೇನು. ಹಿತಾಸಕ್ತಿ ಸಂಘರ್ಷ ಉಂಟಾಗುವುದಿಲ್ಲವೇ” ಎಂದು ಹೆಸರೇಳಲಿಚ್ಚಿಸದ ನಾಗರಿಕರೊಬ್ಬರು ವಿಮರ್ಶಿಸುತ್ತಾರೆ.
ಇವರೂ ‘ಸಂ-ವಾದ’ ಶುರುವಿಟ್ಟುಕೊಂಡರೆ ಹೇಗೆ ?
ಕೆಲ ದಿನಗಳಲ್ಲೇ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳು ಘೋಷಣೆಯಾಗಲಿವೆ ಎಂದು ಹೇಳಲಾಗುತ್ತಿದ್ದು, ಒಂದು ವೇಳೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿಗಳು ‘ಸಂ-ವಾದ’ ಚಾಲೂ ಮಾಡಿದರೆ, ಇವುಗಳನ್ನು ಅಟೆಂಡ್ ಮಾಡಲು ಸಾಧ್ಯವೆ ? ಕೆಲವರು ತಮ್ಮದೇ ಧಾಟಿಯಲ್ಲಿ ಆಕ್ಷೇಪವನ್ನು ವ್ಯಕ್ತಪಡಿಸುತ್ತಾರೆ. ‘ಅಂತೂ ಇಂತೂ ಕೆಲ ಸುದ್ದಿಗಾರರು ಪಕ್ಷ ರಾಜಕಾರಣದಿಂದ ಅಂತರವಿದ್ದರೆ ಬಹಳಷ್ಟು ಒಳ್ಳೆಯದಾಗುತ್ತದೆ’ ಎನ್ನುವುದು ಸಾರ್ವಜನಿಕರೊಬ್ಬರ ಮಾತಾಗಿದೆ.
